ಯಶಸ್ವಿಯಾಗಿ ನಡೆದ ‎ಗಮಕ ಕಾರ್ತಿಕ ಉತ್ಸವ

KannadaprabhaNewsNetwork |  
Published : Nov 03, 2025, 02:03 AM IST
48 | Kannada Prabha

ಸಾರಾಂಶ

ಗಮಕಕಲೆಗೆ ಅಪೂರ್ವ ಪರಂಪರೆ ಇದ್ದು, ಕನ್ನಡ ಕಾವ್ಯಗಳನ್ನು ಉಳಿಸಿ- ಬೆಳೆಸುವ ಕಾರ್ಯವನ್ನು ಇಂದಿಗೂ ನಿರ್ವಹಿಸುತ್ತಿರುವವರು ನಮ್ಮ ಗಮಕಿಗಳು

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಗಮಕ ಕಲಾ ಪರಿಷತ್ತು ‎ಮತ್ತು ಮೈಸೂರು ಜಿಲ್ಲಾ ಘಟಕದ ಆಶ್ರಯದಲ್ಲಿ‎ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಬಿಡಾರಂ ಕೃಷ್ಣಪ್ಪ ರಾಮಮಂದಿರದಲ್ಲಿ ಗುರುವಾರ ಗಮಕ ಕಾರ್ತಿಕ ಉತ್ಸವ ಹಾಗೂ ಗಮಕ ಪರೀಕ್ಷೆಗಳ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ನೆರವೇರಿತು.‎ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‎ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರು ಗಮಕಕಲೆಗೆ ಅಪೂರ್ವ ಪರಂಪರೆ ಇದ್ದು, ಕನ್ನಡ ಕಾವ್ಯಗಳನ್ನು ಉಳಿಸಿ- ಬೆಳೆಸುವ ಕಾರ್ಯವನ್ನು ಇಂದಿಗೂ ನಿರ್ವಹಿಸುತ್ತಿರುವವರು ನಮ್ಮ ಗಮಕಿಗಳು ಮತ್ತು ಗಮಕ ಕಲಾರಾಧಕರು ಎಂದರು.ಮೈಸೂರು ಜಿಲ್ಲಾ ಘಟಕವು ಹಲವು ವರ್ಷಗಳಿಂದ ಕುಮಾರವ್ಯಾಸ ಜಯಂತಿ ಹಾಗೂ ಗಮಕ ಕೇಂದ್ರೀಕೃತ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು ಜಿಲ್ಲಾ ಘಟಕದ ಅಧ್ಯಕ್ಷ ಕೃ.ಪಾ. ಮಂಜುನಾಥ್ ಅವರ ನಿರಂತರ ಕ್ರಿಯಾಶೀಲತೆ ಮತ್ತು ಗಮಕ ಪ್ರೀತಿಯನ್ನು ಅಭಿನಂದಿಸಿದರು.ಹಿರಿಯರಾದ ಎಸ್. ರಾಮಪ್ರಸಾದ್ ಅವರ ಬಹುಮುಖ ವ್ಯಕ್ತಿತ್ವ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಹಿರಿಯರು ಗಮಕ ಕಲಿಕೆಯಲ್ಲಿ ತೊಡಗಿರುವುದು ನನಗೆ ಅಚ್ಚರಿಯೊಂದಿಗೆ ಸಂತೋಷವನ್ನು ನೀಡಿತು ಎಂದರು.‎ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ನಾಟ್ಯಾಚಾರ್ಯ ಪ್ರೊ. ರಾಮಮೂರ್ತಿರಾವ್ ಅವರ ಗಮಕ ಪ್ರೀತಿಯನ್ನು ಅಭಿನಂದಿಸಿ, ಘಟಕದ ವತಿಯಿಂದ ಸನ್ಮಾನಿಸಿ, ಅವರಿಂದಲೇ ಪ್ರಶಸ್ತಿ ಪತ್ರಗಳ ವಿತರಣೆಗೆ ಚಾಲನೆ ನೀಡಲಾಯಿತು.ಮುಖ್ಯ ‎ಅಭ್ಯಾಗತರಾದ ಮುಕ್ತಕ ಸಾಹಿತ್ಯ ಅಕಾಡೆಮಿ ಸ್ಥಾಪಕ ಅಧ್ಯಕ್ಷ ಎಸ್. ರಾಮಪ್ರಸಾದ್ ಅವರು ಗಮಕದ ಹಿರಿಮೆ ಮತ್ತು ಮಹತ್ವವನ್ನು ವಿವರಿಸಿದರು.ಗಮಕ ಸಂಬಂಧಿ ಕಾರ್ಯಕ್ರಮಕ್ಕೆ ಕಾವ್ಯಾಸಕ್ತರ ಬೆಂಬಲ ನಿರಂತರವಾಗಿರಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೃ.ಪಾ. ಮಂಜುನಾಥ್ ಪ್ರಾಸ್ತಾವಿಕ ನುಡಿ ಮತ್ತು ಅಧ್ಯಕ್ಷೀಯ ನುಡಿಗಳಲ್ಲಿ, ಪರಿಷತ್ತಿನ ಮುಂದಿನ ಆಲೋಚನೆ ಮತ್ತು ಗಮಕಿಗಳ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ತಿಳಿಸಿದರು.ಅಲ್ಲದೆ, ‎ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಗಮಕ ಶಿಕ್ಷಕರನ್ನು ಮತ್ತು ಗಮಕಾಭಿಮಾನಿಗಳನ್ನು ಅಭಿನಂದಿಸಿದರು.‎ಕೇಂದ್ರ ಪರಿಷತ್ತು ನಡೆಸಿದ ಗಮಕದ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಹಿರಿಯ ಹಾಗೂ ಕಿರಿಯ ಗಮಕ ಕಲಾವಿದರಿಂದ ಕಾವ್ಯವಾಚನ ಕಾರ್ಯಕ್ರಮ ನಡೆಯಿತು.ಗಮಕ ಶಿಕ್ಷಕಿ ಸುಜಾತಾ ಮೋಹನ್, ಶುಭಾ ರಾಘವೇಂದ್ರ ಹಾಗೂ ಮಂಗಳಾ ರಾಮಮೂರ್ತಿ ಅವರನ್ನು ಒಳಗೊಂಡಂತೆ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ