ಗದಗ:ದೈಹಿಕ ನ್ಯೂನತೆ ಇರುವವರನ್ನು ಜನ ನೋಡುವುದೇ ಬೇರೆ ರೀತಿ ಇರುತ್ತದೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಹಲವರ ಊಹೆ. ಆದರೆ ತಾವು ಕೂಡ ದುಡಿದು ಸ್ವಾವಲಂಬಿಗಳಾಗಬಹುದು ಎನ್ನುವುದಕ್ಕೆ ಈ ವಿಶೇಷ ಚೇತನ ದಂಪತಿ ಸಾಕ್ಷಿಯಾಗಿದ್ದಾರೆ. ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನರೇಗಾದಡಿ ಮೂರು ವಾರಗಳಿಂದ ಬದು ನಿರ್ಮಾಣ ಕೆಲಸ ನೀಡಲಾಗಿದೆ. ಗ್ರಾಮದ ಅಂಗವಿಕಲ ದಂಪತಿ ಹುಲಗೆಪ್ಪ ಸುಬ್ಬಪ್ಪ ಚಲವಾದಿ ಮತ್ತು ಶಾಂತವ್ವ ಹುಲಗೆಪ್ಪ ಚಲವಾದಿ ಅವರು ಮೂರು ನಾಲ್ಕು ವರ್ಷಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ತುಂಬು ಕುಟುಂಬದಲ್ಲಿ ವಾಸವಾಗಿರುವ ದಂಪತಿಗಳಿಗೆ ಯಾವುದೇ ಜಮೀನು ಆಸ್ತಿ ಇಲ್ಲ. ಊರಿನಲ್ಲಿ ವಾಸಿಸಲು ಸ್ವತಃ ಮನೆ ಅಷ್ಟೆ ಇದೆ. ಮನೆಯ ಖರ್ಚು ವೆಚ್ಚಕ್ಕೆ ಅಲ್ಪ ಸಹಾಯವಾಗಲಿ ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿಯಲ್ಲಿ ಪ್ರಸಕ್ತ ವರ್ಷ ಮೂರು ವಾರಗಳಿಂದ ಕೆಲಸ ಮಾಡುತ್ತಿದ್ದಾರೆ.ಉದ್ಯೋಗ ಖಾತ್ರಿಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಕೆಲಸ ಒದಗಿಸುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಉದ್ಯೋಗ ಖಾತ್ರಿ ಕೆಲಸದಲ್ಲಿ ದೈಹಿಕ ನ್ಯೂನತೆ ಎದುರಿಸುತ್ತಿರುವ ಅಂಧರು, ಕೈ ಇಲ್ಲದವರು, ಮೂಗರು, ಕಿವುಡರು ಹೀಗೆ ಕಷ್ಟದ ಬದುಕು ಸವೆಸುತ್ತಿರುವ ವಿಶೇಷಚೇತನರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ತಿಂಗಳ ಮಾಸಾಶನದಲ್ಲೇ ಮಾತ್ರ ಜೀವನ ನಡೆಸುತ್ತಿದ್ದ ಇವರಿಗೆ ಈಗ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.ಇವರಲ್ಲದೆ ಇದೇ ರೀತಿ ಹಲವು ಮಂದಿಗೆ ಆಯಾ ಗ್ರಾಮಸ್ಥರು, ಪಂಚಾಯತಿಯವರು ಆಸಕ್ತಿ ವಹಿಸಿ ಕೆಲಸ ಒದಗಿಸುತ್ತಿರುವುದು ವಿಶೇಷಚೇತನರ ಸಂತಸ ಜೀವನಕ್ಕೆ ಅನುಕೂಲವಾಗಿದೆ. ನಾನು ವಿಕಲಾಂಗನಾಗಿ ಹುಟ್ಟಿದ್ದೇ ತಪ್ಪಾಯ್ತಾ? ಎಂಬ ಭಾವ ಮೂಡಿದವರಿಗೆ, ನರೇಗಾ ಯೋಜನೆ ಹೊಸ ಬದುಕಿನ ಭರವಸೆ, ಪ್ರೀತಿ ಜೊತೆಗೆ ಕಾಳಜಿ ನೀಡಿದೆ. ನರೇಗಾ ಯೋಜನೆಯೂ ನಮಗೆ ಕೆಲಸ ಹಾಗೂ ಹೆಚ್ಚಿನ ಕೂಲಿ ನೀಡುವುದರ ಜೊತೆಗೆ ನೆಮ್ಮದಿಯೂ ನೀಡುತ್ತಿದೆ ಎಂದು ಹುಲಗೆಪ್ಪ ಚಲವಾದಿ ಖುಷಿ ವ್ಯಕ್ತಪಡಿಸುತ್ತಾರೆ.ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ನಿರಂತರ ನರೇಗಾ ಕೆಲಸ ನೀಡುತ್ತಿರುವುದರಿಂದ ವಿಶೇಷಚೇತನರಿಗೆ ಇದ್ದೂರಲ್ಲೇ ಕೆಲಸ ಸಿಗುತ್ತಿದೆ. ನರೇಗಾ ಕೂಲಿ ದಿನಕ್ಕೆ 370ಗೆ ಹೆಚ್ಚಿಸಿದ್ದರಿಂದ ಅಂಗವಿಕಲರು ಖುಷಿಯಿಂದ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ತಾಪಂ ಇಒ ಮಲ್ಲಯ್ಯ ಕೊರವನವರ ಹೇಳುತ್ತಾರೆ.