ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆಯಲ್ಲಿ ಆಡಳಿತಾಧಿಕಾರಿ ಅಧಿಕಾರದಲ್ಲಿರುವ ಸಮಯದಲ್ಲಿ ಹಸ್ತಾಂತರ ಮಾಡಿಕೊಂಡಿರುವ ಕೆಎಚ್‌ಬಿ ಬಡಾವಣೆಯನ್ನು ಮತ್ತೆ ಕರ್ನಾಟಕ ಗೃಹ ಮಂಡಳಿಗೆ ವಾಪಸ್ ನೀಡುವುದಕ್ಕೆ ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರೆಲ್ಲರೂ ಒಮ್ಮತದ ನಿರ್ಣಯ ಕೈಗೊಂಡರು.ಸೋಮವಾರ ನಗರದ ಧರಣಪ್ಪ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಕೆಎಚ್‌ಬಿ ಬಡಾವಣೆಗೆ ಮೂಲಸೌಕರ್ಯಗಳನ್ನು ಒದಗಿಸುವ ವಿಚಾರ ಚರ್ಚೆಗೆ ಬಂದ ವೇಳೆ ಸದಸ್ಯ ಎಚ್.ಎಸ್.ಮಂಜು ಅವರು ೨೦೦೧ರಲ್ಲಿ ಬಡಾವಣೆ ರಚನೆಗೊಂಡು ೧೮ ವರ್ಷಗಳ ನಂತರ ನಗರಸಭೆಗೆ ಹಸ್ತಾಂತರ ಮಾಡಿದ್ದೀರಿ. ಅದೂ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವ ಸಮಯದಲ್ಲಿ ಆಡಳಿತಾಧಿಕಾರಿ ಮುಖಾಂತರ ಬಡಾವಣೆಯನ್ನು ಹಸ್ತಾಂತರಿಸಿದ್ದೀರಿ. ಇದು ನಿಯಮಬಾಹಿರ ಎಂದು ಹೇಳಿದರು.
ಕೆಎಚ್‌ಬಿ ಬಡಾವಣೆಯಲ್ಲಿರುವ ಮೂಲೆ ನಿವೇಶನಗಳು, ಸಿಎ ಜಾಗ ಸೇರಿದಂತೆ ಇತರೆ ಆಸ್ತಿಗಳು ಇನ್ನೂ ಕೆಎಚ್‌ಬಿಯಲ್ಲೇ ಉಳಿದುಕೊಂಡಿವೆ. ನಗರಸಭೆ ಹಸ್ತಾಂತರದ ಬಳಿಕವೂ ಮೂಲೆ ನಿವೇಶನಗಳನ್ನು ಮಾರಿ ಬಂದ ಹಣವನ್ನೂ ತಾವೇ ಇಟ್ಟುಕೊಳ್ಳುವುದಾದರೆ ಮೂಲಸೌಲಭ್ಯಗಳನ್ನು ಒದಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಇದಕ್ಕೆ ಗೃಹಮಂಡಳಿ ಸಹಾಯಕ ಇಂಜಿನಿಯರ್ ಲಾರೆನ್ಸ್ ಪ್ರತಿಕ್ರಿಯಿಸಿ, ಬಡಾವಣೆ ಹಸ್ತಾಂತರ ಸಮಯದಲ್ಲಿ ೫.೫೦ ಕೋಟಿ ರು. ಹಾಗೂ ಒಳಚರಂಡಿ ನಿರ್ಮಾಣಕ್ಕೆ ೮೯ ಲಕ್ಷ ರು.ಗಳನ್ನು ನೀಡಲಾಗಿತ್ತು ಎಂದಾಗ, ಅಧ್ಯಕ್ಷ ನಾಗೇಶ್ ಮಧ್ಯಪ್ರವೇಶಿಸಿ ನೀವು ಕೊಟ್ಟಿರುವ ಹಣ ಇವತ್ತಿನ ಎಸ್‌ಆರ್ ದರದಲ್ಲಿ ನಾಲ್ಕು ರಸ್ತೆಯನ್ನು ಮಾಡಲಾಗುವುದಿಲ್ಲ. ಗೃಹಮಂಡಳಿ ವತಿಯಿಂದ ಮಾಡಿರುವ ಕಾಮಗಾರಿಗಳೂ ಸಂಪೂರ್ಣ ಅವೈಜ್ಞಾನಿಕವಾಗಿವೆ. ಪ್ರಾಧಿಕಾರದ ನಿಯಮದಲ್ಲಿರುವಂತೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕಿತ್ತು. ಕಾನೂನುಬದ್ಧವಾಗಿ ಬಡಾವಣೆ ಹಸ್ತಾಂತರವಾಗದಿರುವುದರಿಂದ ಅದನ್ನು ನಿಮಗೇ ವಾಪಸ್ ನೀಡುವುದಾಗಿ ತಿಳಿಸಿದರು.
ಸದಸ್ಯ ಎಚ್.ಎಸ್.ಮಂಜು ಮಾತನಾಡಿ, ಇವತ್ತಿನ ದರದ ಪ್ರಕಾರ ಕೆಎಚ್‌ಬಿ ಬಡಾವಣೆಗೆ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸಲು ೩೦ ರಿಂದ ೩೫ ಕೋಟಿ ರು. ಅವಶ್ಯಕತೆ ಇದೆ. ಆ ಹಣವನ್ನು ಗೃಹಮಂಡಳಿಯಿಂದ ದೊರಕಿಸಿಕೊಡುವುದಾದರೆ ಕಾಮಗಾರಿ ಮಾಡಲು ನಾವು ಸಿದ್ಧ. ಇಲ್ಲದಿದ್ದರೆ ನೀವು ರಚಿಸಿರುವ ಬಡಾವಣೆಯನ್ನು ನಿಮ್ಮಲ್ಲೇ ಇಟ್ಟುಕೊಂಡು ನಿರ್ವಹಣೆ ಮಾಡಿಕೊಳ್ಳಿ. ಈ ಸಂಬಂಧ ಕೂಡಲೇ ಪತ್ರ ವ್ಯವಹಾರ ನಡೆಸಿ ಬಡಾವಣೆಯ ನಿರ್ವಹಣೆ ಹೊಣೆಗಾರಿಕೆಯಿಂದ ಬಿಡುಗಡೆಗೊಳ್ಳುವಂತೆ ಒತ್ತಾಯಿಸಿದರು.ಕೊಳಚೆ ಮಂಡಳಿ ಸಂಪೂರ್ಣ ನಿಷ್ಕ್ರೀಯ:
ನಗರದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಸಂಪೂರ್ಣ ನಿಷ್ಕ್ರೀಯವಾಗಿದೆ. ನಗರ ವ್ಯಾಪ್ತಿಯಲ್ಲಿರುವ ಗಾಂಧಿನಗರ ಮುಸ್ಲಿಂ ಬ್ಲಾಕ್, ಕಲ್ಲಹಳ್ಳಿ ಮುಸ್ಲಿಂ ಬ್ಲಾಕ್ ಸೇರಿದಂತೆ ಇನ್ನಿತರೆ ಕೊಳಚೆ ಪ್ರದೇಶಗಳಲ್ಲಿ ಸುಮಾರು ೫೦೦ ಮನೆಗಳನ್ನು ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡು ಆರು ವರ್ಷಗಳು ಕಳೆದರೂ ಇದುವರೆಗೆ ೨೦೦ ಮನೆಗಳನ್ನಷ್ಟೇ ಪೂರ್ಣಗೊಳಿಸಿದ್ದಾರೆ ಎಂದು ಸದಸ್ಯ ನಹೀಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ನಾನೇ ಜಮೀರ್ ಅಹಮದ್ ಅವರೊಂದಿಗೆ ಮಾತನಾಡಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸೂಚನೆ ಕೊಡಿಸಿದ್ದೇನೆ. ಕರೀಗೌಡ ಎಂಬುವರೇ ಗುತ್ತಿಗೆದಾರರಾಗಿದ್ದಾರೆ. ಇವರು ಸಕಾಲಕ್ಕೆ ಮನೆಗಳನ್ನು ನಿರ್ಮಿಸಿ ಪ್ರಮಾಣಪತ್ರಗಳನ್ನು ನೀಡಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತದೆ. ಮನೆಗಳ ನಿರ್ಮಾಣವನ್ನು ಅಧಿಕೃತ ಗುತ್ತಿಗೆದಾರರ ಉಪಗುತ್ತಿಗೆಗಳನ್ನು ನೀಡಿದ್ದು, ಅವರೊಂದಿಗೆ ಸೇರಿಕೊಂಡು ಅರ್ಧಂಬರ್ಧ ಮನೆಗಳನ್ನು ನಿರ್ಮಿಸಿದ್ದಾರೆ ಎಂದು ದೂರಿದರು.
ಇದಕ್ಕೆ ಸದಸ್ಯ ಭಾರತೀಶ್ ದನಿಗೂಡಿಸಿ, ನಮ್ಮಲ್ಲಿ ಇನ್ನೂ ಗುಡಿಸಲು ಹಾಕಿಕೊಂಡು ಪರದೆ ಎಳೆದುಕೊಂಡು ನಿಕೃಷ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ನಿಮಗೆ ಸ್ವಲ್ಪವೂ ಮಾನವೀಯತೆಯೇ ಇಲ್ಲವಲ್ರೀ. ೫೦೦ ಮನೆಗಳನ್ನು ನಿರ್ಮಿಸಲು ಆರು ವರ್ಷ ಬೇಕೇನ್ರೀ. ಇಂತಹ ದುರವಸ್ಥೆ ನೋಡಿದರೆ ನಾಚಿಕೆಯಾಗುತ್ತದೆ ಎಂದು ಹರಿಹಾಯ್ದರು.ಕೊಳಚೆ ಮಂಡಳಿ ಅಧಿಕಾರಿ ನಾಗೇಂದ್ರ ಮಾತನಾಡಿ, ಮಂಡ್ಯ ನಗರ ವ್ಯಾಪ್ತಿಗೆ ಕಳೆದ ಐದು ವರ್ಷಗಳಿಂದ ಸರ್ಕಾರದಿಂದ ನಯಾಪೈಸೆ ಹಣ ಬಂದಿಲ್ಲ. ನಾವು ಏನು ಮಾಡೋಣ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆಗ ಮಧ್ಯಪ್ರವೇಶಿಸಿದ ಸದಸ್ಯ ಎಚ್.ಎಸ್.ಮಂಜು, ಕೊಳಗೇರಿ ಮಂಡಳಿ ನಗರದೊಳಗೆ ನಿಷ್ಕ್ರೀಯವಾಗಿದೆ. ಮಂಡಳಿಯಿಂದ ನಡೆಸಲಾಗಿರುವ ಕಾಮಗಾರಿಗಳನ್ನು ಸಮಗ್ರ ತನಿಖೆಗೊಳಪಡಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲು ನಿರ್ಣಯ ಮಾಡುವಂತೆ ಸಭೆಯನ್ನು ಒತ್ತಾಯಿಸಿದಾಗ ಎಲ್ಲರೂ ಮೇಜುಕುಟ್ಟಿ ಬೆಂಬಲ ಸೂಚಿಸಿದರು.ಶಾಸಕರ ಒತ್ತಡ:
ಮರಕಾಡುದೊಡ್ಡಿ ಬಡಾವಣೆ ನಗರಸಭೆ ವ್ಯಾಪ್ತಿಯಿಂದ ಹೊರಗಿದೆ. ಆದರೂ ಆ ಬಡಾವಣೆಯನ್ನು ನಗರಸಭೆಗೆ ಸೇರಿಸಿಕೊಂಡು ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕರಿಂದ ಒತ್ತಡ ಹೆಚ್ಚಿದೆ. ಅವರು ಯಾವ ಕಾರಣಕ್ಕೆ ಆ ರೀತಿ ಹೇಳುತ್ತಿರುವರೋ ಗೊತ್ತಿಲ್ಲ. ಬಡಾವಣೆ ನಗರಸಭೆ ವ್ಯಾಪ್ತಿಗೆ ಬಾರದಿರುವುದರಿಂದ ಅದನ್ನು ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿಸುವಂತೆ ಅಧ್ಯಕ್ಷ ನಾಗೇಶ್ ನೇರವಾಗಿ ಹೇಳಿದರು.ಹಿಂದೆ ಆ ಬಡಾವಣೆ ೩೫ನೇ ವಾರ್ಡ್‌ನಲ್ಲಿತ್ತು. ಆ ಸಮಯದಲ್ಲೇ ಬಡಾವಣೆಗೆ ಅಗತ್ಯವಿರುವ ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ದೊರಕಿಸಲಾಗಿದೆ. ಅಲ್ಲಿ ಪೌರ ಕಾರ್ಮಿಕರು ಯಾರೂ ವಾಸಿಸುತ್ತಿಲ್ಲ. ಇದ್ದವರೆಲ್ಲರೂ ನಿವೃತ್ತರಾಗಿದ್ದಾರೆ. ಹಾಗಾಗಿ ಆ ಬಡಾವಣೆಯನ್ನು ಕಾನೂನುಬದ್ಧವಾಗಿ ಬೇಲೂರು ಪಂಚಾಯಿತಿಗೆ ಸೇರಿಸುವಂತೆ ಅಧ್ಯಕ್ಷರು ಮತ್ತು ಸದಸ್ಯರು ನಿರ್ಧಾರ ಕೈಗೊಂಡರು.
ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಪಂಪಾಶ್ರೀ ಇದ್ದರು.-----
ಬಿ- ಖಾತೆ ಮಾಡಿಸಿಕೊಳ್ಳದಿದ್ದರೆ ನೀರು, ಕರೆಂಟ್ ಕಟ್!ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವ್ಯಾಪ್ತಿಯೊಳಗೆ ಆರ್‌ಟಿಸಿಯಲ್ಲಿರುವ ಮನೆಗಳು, ನಿವೇಶನಗಳನ್ನು ಬಿ- ಖಾತೆ ಮಾಡಿಸಿಕೊಳ್ಳುವುದಕ್ಕೆ ರಾಜ್ಯಸರ್ಕಾರ ಅವಕಾಶ ನೀಡಿದ್ದರೂ ಬಿ-ಖಾತೆ ಮಾಡಿಸಿಕೊಳ್ಳದ ಮನೆಗಳ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಸದಸ್ಯ ಎಚ್.ಎನ್.ರವಿ ಒತ್ತಾಯಿಸಿದರು.ನಗರಸಭೆ ವ್ಯಾಪ್ತಿಯಲ್ಲಿ ಬಿ- ಖಾತೆ ಆಂದೋಲನ ನಡೆಸುತ್ತಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಬಿ- ಖಾತೆ ಮಾಡಿಸಿಕೊಳ್ಳುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಬಿ-ಖಾತೆ ಮಾಡಿಸಿಕೊಳ್ಳಲು ಬೇಜವಾಬ್ದಾರಿ ತೋರುತ್ತಿರುವ ಮನೆಗಳನ್ನು ಗುರುತಿಸಿ ಹದಿನೈದು ದಿನಗಳೊಳಗೆ ಬಿ- ಖಾತೆ ಮಾಡಿಸಿಕೊಳ್ಳದಿದ್ದರೆ ನಗರಸಭೆ ವತಿಯಿಂದ ಒದಗಿಸುತ್ತಿರುವ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಸಾಮಾನ್ಯಸಭೆಯಲ್ಲಿ ಆಗ್ರಹಪಡಿಸಿದರು.
-------------ನಗರದಲ್ಲಿ ಹೆಚ್ಚುತ್ತಿರುವ ಅಕ್ರಮ ಮನೆಗಳ ನಿರ್ಮಾಣ
ಕನ್ನಡಪ್ರಭ ವಾರ್ತೆ ಮಂಡ್ಯನಗರದೊಳಗೆ ಅಕ್ರಮ ಮನೆಗಳ ನಿರ್ಮಾಣ ಹೆಚ್ಚುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ಅನಧಿಕೃತ ಮನೆಗಳ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳೂ ಒತ್ತಾಸೆಯಾಗಿ ನಿಂತಿದ್ದಾರೆ ಎಂದು ಸದಸ್ಯ ಎಚ್.ಎಸ್.ಮಂಜು ಆರೋಪಿಸಿದರು.
ಶ್ರೀಮಂತರು, ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ಧೈರ್ಯದಿಂದಲೇ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಮಾಯಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಾಮಾನ್ಯರು ಕಟ್ಟಡ ನಿರ್ಮಿಸುವುದಕ್ಕೆ ನೂರೆಂಟು ನಿಯಮ, ಷರತ್ತುಗಳನ್ನೆಲ್ಲಾ ಕೇಳುವ ಅಧಿಕಾರಿಗಳು ಅಕ್ರಮವಾಗಿ ಮನೆ ನಿರ್ಮಿಸುತ್ತಿರುವವರಿಗೆ ನೋಟಿಸ್ ಕೊಟ್ಟು ಮನೆ ನಿರ್ಮಾಣವನ್ನು ಸ್ಥಗಿತಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇದರಿಂದ ನಗರಸಭೆ ಆಡಳಿತ ಎತ್ತ ಸಾಗುತ್ತಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ಅನಧಿಕೃತ ಮನೆಗಳ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷರು- ಪೌರಾಯುಕ್ತರನ್ನು ಒತ್ತಾಯಿಸಿದರು.