ಗುಳೆ ಹೋಗುವುದನ್ನು ತಡೆದ ನರೇಗಾ ಯೋಜನೆ

KannadaprabhaNewsNetwork |  
Published : May 16, 2024, 12:54 AM ISTUpdated : May 16, 2024, 12:41 PM IST
ಹೂವಿನಹಡಗಲಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಕೆರೆಗಳಲ್ಲಿ ನರೇಗಾ ಕೂಲಿ ಕಾರ್ಮಿಕರು ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿರುವುದು. | Kannada Prabha

ಸಾರಾಂಶ

ಅಂತರ್ಜಲ ಮರುಪೂರಣ ಹಾಗೂ ಜನ ಜಾನುವಾರುಗಳಿಗೆ ಕುಡಿವ ನೀರಿನ ದಾಹ ನೀಗಿಸಲು, ಕೆರೆಯಂಗಳದ ಹೂಳೆತ್ತುವ ಕಾಮಗಾರಿ ಆಯಾ ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ಚಂದ್ರು ಕೊಂಚಿಗೇರಿ

ಹೂವಿನ ಹಡಗಲಿ: ರೈತರು, ಕೂಲಿ ಕಾರ್ಮಿಕರಿಗೆ ಬರಗಾಲವು ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಡ ಕೂಲಿ ಕಾರ್ಮಿಕರ ಕೈಗೆ ಕೆಲಸ ನೀಡುವ ಮೂಲಕ ಗುಳೆ ಹೋಗುವುದನ್ನು ತಡೆಗಟ್ಟಿದೆ.

ಸಣ್ಣ ನೀರಾವರಿ ಇಲಾಖೆಗೆ 8 ಕೆರೆಗಳು, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಗೆ 6 ಕೆರೆ ಸೇರಿದಂತೆ ಒಟ್ಟು 14 ಕೆರೆಗಳಿವೆ. ಇದನ್ನು ಹೊರತುಪಡಿಸಿ ಸಣ್ಣ ಪುಟ್ಟ ಕೆರೆಗಳಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ನೀರು ತುಂಬಿಸಲಾಗುತ್ತಿದೆ. ಇತ್ತ ತುಂಗಭದ್ರ ನದಿ ಬತ್ತಿ ಹೋಗಿದ್ದು, ಅತ್ತ ಎಲ್ಲ ಕೆರೆಗಳು ನೀರಿಲ್ಲದೇ ಬತ್ತಿ ಹೋಗಿವೆ.

ಅಂತರ್ಜಲ ಮರುಪೂರಣ ಹಾಗೂ ಜನ ಜಾನುವಾರುಗಳಿಗೆ ಕುಡಿವ ನೀರಿನ ದಾಹ ನೀಗಿಸಲು, ಕೆರೆಯಂಗಳದ ಹೂಳೆತ್ತುವ ಕಾಮಗಾರಿ ಆಯಾ ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ತಾಲೂಕಿನ 26 ಗ್ರಾಪಂ ವ್ಯಾಪ್ತಿಯಲ್ಲಿ 18 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಇದೆ. ಇದರಲ್ಲಿ ಈಗಾಗಲೇ ಅಂದಾಜು 5 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ. ಪ್ರತಿ ಗ್ರಾಮದ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ.

ಕೊಯಿಲಾರಗಟ್ಟಿ ಕೆರೆ, ದೇವಗೊಂಡನಹಳ್ಳಿ ಕೆರೆ, ಮುದೇನೂರು ಕೆರೆ, ಅರಳಿಹಳ್ಳಿ ಕೆರೆ, ಕುರುವತ್ತಿ ಕೆರೆ, ಹ್ಯಾರಡದ ಹಳೆ ಮಲಿಯಮ್ಮ ಕೆರೆ, ಹೊಸ ಮಲಿಯಮ್ಮನ ಕೆರೆ, ಡೊಂಬರಹಳ್ಳಿ ಕೆರೆ, ಸೋವೇನಹಳ್ಳಿ ಕೆರೆ ಹೀಗೆ 9 ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ನಿತ್ಯ 8ರಿಂದ 10 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಕೆರೆಗಳು ಇಲ್ಲದ ಹಳ್ಳಿಗಳಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ ಡ್ಯಾಂ ಹೂಳೆತ್ತುವುದು, ರೈತರ ಜಮೀನುಗಳಲ್ಲಿ ನಾಲಾ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ, ಒಟ್ಟಾರೆ ಹರಿದು ಹೋಗುವ ಮಳೆ ನೀರನ್ನು ತಡೆದು ನಿಲ್ಲಿಸುವ ಮೂಲಕ, ಅಂತರ್ಜಲ ಮರು ಪೂರಣ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಗಿದೆ.

ರೈತರ ಜಮೀನುಗಳಲ್ಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಪ್ರತಿ ವರ್ಷ ಕಾಫಿ ಸೀಮೆ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸ ಅರಸಿ ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದರು. ಈ ಬಾರಿ ಸ್ಥಳೀಯವಾಗಿಯೇ ನರೇಗಾ ಯೋಜನೆಯಲ್ಲಿ 100 ದಿನಗಳ ಕಾಲ ಕೆಲಸ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಕುಟುಂಬದ ಸದಸ್ಯರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಲೂಕಿನ ಬಹುತೇಕ ಕೆರೆಗಳು ನೀರಿಲ್ಲದೇ ಬತ್ತಿ ಹೋಗಿವೆ. ಬರದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಕೆರೆಯಲ್ಲಿನ ಹೂಳೆತ್ತುವ ಕೆಲಸ ನೀಡಲಾಗಿದೆ. ಮಳೆ ನೀರಿನಿಂದ ಕೆರೆಗಳು ತುಂಬಿದರೆ, ಅತ್ತ ರೈತರ ಕೊಳವೆಗೂ ಅಂತರ್ಜಲ ಹೆಚ್ಚಳವಾಗುತ್ತದೆ. ಆಯಾ ಹಳ್ಳಿಗಳಲ್ಲಿ ಕುಡಿವ ನೀರಿನ ಬವಣೆ ತಪ್ಪಿಸಿದಂತಾಗುತ್ತದೆ ಎನ್ನುತ್ತಾರೆ ನರೇಗಾ ಯೋಜನೆ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ.

ಪ್ರತಿ ಬಾರಿ ಕೆಲಸ ಅರಸಿ ಮಂಗಳೂರು, ಗೋವಾ ಕಡೆಗೆ ಗುಳೆ ಹೋಗುತ್ತಿದ್ದೆವು. ಆದರೆ ನಮ್ಮೂರಿನಲ್ಲೇ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಪಂ ಅಧಿಕಾರಿಗಳು ಕೆಲಸ ನೀಡಿದ್ದಾರೆ. ಇದರಿಂದ ಬಹಳಷ್ಟು ಅನುಕೂಲವಾಗಿದೆ ಎನ್ನುತ್ತಾರೆ ನರೇಗಾ ಕೂಲಿ ಕಾರ್ಮಿಕ ಹನುಮಂತ ನಾಯ್ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!