ನರೇಗಾ ಯೋಜನೆ ಗ್ರಾಮೀಣ ಜನರಿಗೆ ವರದಾನ: ಗಜಾನನ ಬಾಳೆ

KannadaprabhaNewsNetwork | Published : Feb 4, 2024 1:32 AM

ಸಾರಾಂಶ

ಸ್ಥಳೀಯವಾಗಿಯೇ ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನರೇಗಾ ಯೋಜನೆ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಯೋಜನೆ ವರದಾನವಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನರೇಗಾ ಯೋಜನೆ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಯೋಜನೆ ವರದಾನವಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯ್ತಿ ಪ್ರೊಬೇಷನರಿ ಕಾರ್ಯ ನಿರ್ವಾಹಕ ಅಧಿಕಾರಿ ಗಜಾನನ ಬಾಳೆ (ಐಎಎಸ್) ಹೇಳಿದರು.

ಅವರು ಅಫಜಲ್ಪುರ ತಾಲೂಕಿನ ಅಳ್ಳಗಿ ಬಿ. ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನರೇಗಾ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ನರೇಗಾ ಯೋಜನೆ ಕಳೆದ 17 ವರ್ಷಗಳಿಂದ ನಿರಂತರವಾಗಿ ಕೆಲಸ ಒದಗಿಸಿ ಸ್ವಾವಲಂಬಿಗಳಾಗಿ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಜನರು ಕೂಲಿ ಕೆಲಸಕ್ಕಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ನರೇಗಾ ಯೋಜನೆ ಅಡಿಯಲ್ಲಿ 100 ಮಾನವ ದಿನಗಳ ಕೆಲಸ ಪಡೆಯಬೇಕು.ಜೊತೆಗೆ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮಾತನಾಡಿ ನರೇಗಾ ಯೋಜನೆ ಅಡಿಯಲ್ಲಿ 100 ದಿನಗಳ ಕಾಲ ಕೆಲಸ ಪೊರೈಸಿದ ಕೂಲಿ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಮುಂಬರುವ ದಿನಗಳಲ್ಲಿ ನರೇಗಾ ಕಾರ್ಯದಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸಲಾಗುವುದು. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಜನರು ಸ್ವಂತ ಊರಲ್ಲೇ ಕೂಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು

ನರೇಗಾ ಯೋಜನೆ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಮಾತನಾಡಿ, ಗ್ರಾಮೀಣ ಮಹಿಳೆಯರ ಜೀವನ ಸುಧಾರಿಸುವಲ್ಲಿ ನರೇಗಾ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಯೋಜನೆಯ ಸದ್ಬಳಕೆಗೆ ಎಲ್ಲರ ಸಹಭಾಗಿತ್ವ, ಸಹಕಾರ ಅತ್ಯಗತ್ಯವಾಗಿದೆ.ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನರೇಗಾ ಯೋಜನೆ ಅಡಿಯಲ್ಲಿ 100 ದಿನ ಕೂಲಿ ಪೂರೈಸಿದ ಕೂಲಿಕಾರರಿಗೆ ಸನ್ಮಾನಿಸಲಾಯಿತು. ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಆರತಿ ಬಂಕದ, ಅಭಿವೃದ್ಧಿ ಅಧಿಕಾರಿ ಶರಣಪ್ಪ ಡೆಂಗಿ, ಎಸ್.ಡಿ.ಎ. ದೌಲಪ್ಪ ತಾಂತ್ರಿಕ ಸಂಯೋಜಕಿ ಮಾಲಾಶ್ರೀ ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ ಟಿಎಇ ಟಿ ಎಂ ಐ ಎಸ್ ಫೀಲ್ಡ್ ಅಸಿಸ್ಟಂಟ್ ಬಿಎಫ್ ಟಿ, ಜಿ ಕೆ ಎಂ ಟಿ ಆರ್ ಎಂ ಗ್ರಾಮ ಕಾಯಕ ಮಿತ್ರರು ಕೂಲಿ ಕಾರ್ಮಿಕರಿದ್ದರು.

Share this article