ಕುಷ್ಟಗಿ: ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಬೋದೂರು ತಾಂಡಾದಲ್ಲಿ ಕೇಕ್ ಕತ್ತರಿಸಿ ನರೇಗಾ ಯೋಜನೆ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ನರೇಗಾ ಯೋಜನೆಯಲ್ಲಿ ಉದ್ಯೋಗ ಖಾತರಿ ಕಾರ್ಡುಗಳನ್ನು ಹೊಂದಿದ ಕುಟುಂಬಕ್ಕೆ 100 ದಿನಗಳ ಕಾಲ ಕೆಲಸ ನೀಡುವ ಮೂಲಕ ಅವರ ಕುಟುಂಬದ ನಿರ್ವಹಣೆಗೆ ಅನೂಕೂಲವಾಗುವಂತೆ ನೋಡಿಕೊಳ್ಳುತ್ತಿದೆ. ಗಿಡ ಸದೃಢವಾಗಿರಲು ಬೇರು ಗಟ್ಟಿಯಾಗಿರಬೇಕು. ಗ್ರಾಮೀಣ ಜನರು ಪ್ರಗತಿಯಾಗಲು ನರೇಗಾ ಯೋಜನೆಯ ಬಲವಿರಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕ ಲಿಂಗನಗೌಡ ಹಿರೇಹಾಳ ಮಾತನಾಡಿ, ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ಭಾಗದ ಸಮಗ್ರ ಶಾಲಾ ಅಭಿವೃದ್ಧಿಯಡಿ ಹೈಟೆಕ್ ಶೌಚಾಲಯ ನಿರ್ಮಾಣ, ತಡೆಗೋಡೆ ನಿರ್ಮಾಣ, ಮಳೆ ನೀರಿನ ಕೊಯ್ಲು, ಪೌಷ್ಟಿಕ ಕೈತೋಟ, ಶಾಲಾ ಅಡುಗೆ ಕೋಣೆ ಮತ್ತು ಭೋಜನಾಲಯ, ಆಟದ ಅಂಕಣಗಳ ನಿರ್ಮಾಣಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಪ್ರತಿಭೆಗಳು ಹೊರಬರಲು ಒತ್ತು ನೀಡಲಾಗಿದೆ ಎಂದರು.ಅಂತರ್ಜಲ ಮಟ್ಟ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಾದ ಅಮೃತ ಸರೋವರ ಕೆರೆಗಳ ನಿರ್ಮಾಣ, ಕಂದಕ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿಯಿಂದ ತಾಲೂಕಿನ ರೈತರ ಹೊಲಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡಿದೆ. ಹೊಲದಲ್ಲಿ ತೇವಾಂಶ, ಫಲವತ್ತತೆ ಹೆಚ್ಚಿಸಲಾಗಿದೆ. ರೈತರು ಆರ್ಥಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಲಾಗಿದೆ ಎಂದರು.
ನರೇಗಾ ಯೋಜನೆಯಡಿ 100 ದಿನಗಳನ್ನು ಪೂರೈಸಿರುವ ಕುಟುಂಬ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ ಕಂದಗಲ್, ಪಿಡಿಒ ಆನಂದರಾವ ಕುಲಕರ್ಣಿ, ಗ್ರಾಪಂ ಸದಸ್ಯರಾದ ಭೀಮೇಶ, ಯಮನಪ್ಪ, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಆರೋಗ್ಯ ಇಲಾಖೆ ಸಿಬ್ಬಂದಿ ನಾಗೇಶ ಭೋವಿ, ಚೆನ್ನಬಸಪ್ಪ ಹನುಮನಾಳ, ಎಸ್.ಎಸ್. ಪಾಟೀಲ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ನೀಲಕಂಠಪ್ಪ, ಬಾಲಾಜಿ, ಯಂಕಪ್ಪ, ಹನುಮಂತಪ್ಪ, ಸ್ವಾತಿ, ಕೂಲಿ ಕಾರ್ಮಿಕರು ಇದ್ದರು.