ಎಲ್ಲ ವರ್ಗದವರಿಗೆ ಕಾರ್ಯಕ್ರಮ ರೂಪಿಸಿದ್ದ ಅರಸು

KannadaprabhaNewsNetwork | Published : Feb 3, 2024 1:52 AM

ಸಾರಾಂಶ

ಅರಸು ಅವರು ಸಮಾಜದ ದೀನದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಸಮಾಜದ ತುಳಿತಕ್ಕೊಳಗಾದ ವರ್ಗಗಳಿಗೆ ಧ್ವನಿ ನೀಡಿದ ಅರಸ್ ಅನ್ನು 'ಧ್ವನಿ ಕೊಟ್ಟ ದಣಿ'' ಎಂದು ಈಗಲು ಕರೆಯಲು ಹೆಮ್ಮೆ ಎನಿಸುತ್ತದೆ. ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದ ಸೂಕ್ಷ್ಮ ಸಮುದಾಯಗಳಿಗೂ ಅರ್ಹ ಮೀಸಲಾತಿಯನ್ನು ಒದಗಿಸಿದ್ದಾರೆ

- ಮಾಜಿ ಮುಖ್ಯಮಂತ್ರಿಗಳನ್ನು ಶ್ಲಾಘಿಸಿದ ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ

- ಆರು ಸಾಧಕರಿಗೆ ಧ್ವನಿ ಕೊಟ್ಟ ದಣಿ ಪ್ರಶಸ್ತಿ ಪ್ರದಾನ

- ಅರಸು ಪತ್ರಿಕೆಯ ಹನ್ನೊಂದನೇ ವಾರ್ಷಿಕೋತ್ಸವ ಸಂಭ್ರಮ

--

ಕನ್ನಡಪ್ರಭ ವಾರ್ತೆ ಮೈಸೂರು

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಕೇವಲ ಒಂದು ವರ್ಗದವರಿಗೆ ಸೀಮಿತವಾಗದೇ ಎಲ್ಲರಿಗೂ ಪ್ರಯೋಜನ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಟಿ. ತಿಮ್ಮಯ್ಯ ಸ್ಮರಿಸಿದರು.

ಜೆಎಲ್ ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಅನ್ವೇಷಣಾ ಸೇವಾ ಟ್ರಸ್ಟ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಅರಸು ಪತ್ರಿಕೆಯ ಹನ್ನೊಂದನೇ ವರ್ಷದ ಸಂಭ್ರಮ, ಸಾಧಕರಿಗೆ ಧ್ವನಿ ಕೊಟ್ಟ ದಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿ ನಿಷೇಧ, ಉಳುವವನೇ ಭೂಮಿಯ ಒಡೆಯ ಮೊದಲಾದ ನಿರ್ಣಯಗಳು ಪ್ರಮುಖವಾಗಿವೆ ಎಂದರು.

ಅರಸು ಅವರು ಸಮಾಜದ ದೀನದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಸಮಾಜದ ತುಳಿತಕ್ಕೊಳಗಾದ ವರ್ಗಗಳಿಗೆ ಧ್ವನಿ ನೀಡಿದ ಅರಸ್ ಅನ್ನು ''ಧ್ವನಿ ಕೊಟ್ಟ ದಣಿ'''' ಎಂದು ಈಗಲು ಕರೆಯಲು ಹೆಮ್ಮೆ ಎನಿಸುತ್ತದೆ. ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದ ಸೂಕ್ಷ್ಮ ಸಮುದಾಯಗಳಿಗೂ ಅರ್ಹ ಮೀಸಲಾತಿಯನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.

ನಾನು ಅರಸು ಅವರ ಹುಟ್ಟೂರಿನಿಂದ ಬಂದು ಹಾಗೂ ಎಂಬಿಬಿಎಸ್ ಮುಗಿದ ನಂತರ ನೇರವಾಗಿ ಸರ್ಕಾರಿ ಹುದ್ದೆ ಪಡೆದ ಫಲಾನುಭವಿಯಾಗಿದ್ದು, ಬಡವರಿಗೆ ದೀನ ದಲಿತರಿಗೆ ಅಸಂಘಟಿತರಿಗೆ ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದರ ಜೊತೆಗೆ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿದ್ದಂತಹ ಏಕೈಕ ವ್ಯಕ್ತಿ ಕೂಡ ಆಗಿದ್ದು, ಅರಸು ಅವರಾಗಿದ್ದಾರೆ ಎಂದರು.

ಅರಸು ಅವರು ರಾಜಮನೆತನದಿಂದ ಬಂದಿದ್ದು ದೀನ ದಲಿತರ ಬಡವರ ಪರವಾಗಿ ಸದಾ ಬೆನ್ನೆಲುಬಾಗಿ ನಿಂತಿದ್ದರು. ಸದಾ ಜನಸೇವೆ ಮಾಡುವುದರಲ್ಲೇ ತನ್ನ ಜೀವನವನ್ನು ಮುಡಿಪಾಗಿಟ್ಟರು, ಇಂದು ಇಲ್ಲದ ಅರಸು ಅವರು ಮಾಡಿದಂತಹ ಸಮಾಜ ಸೇವೆ ಕೆಲಸಗಳು ಇಂದಿಗೂ ಅಜಾರಮರ ಎಂದು ಅವರು ಶ್ಲಾಘಿಸಿದರು.

ನಾನು ಇವತ್ತಿಗೂ ನಾನು ಅರಸು ಅವರನ್ನು ಸ್ಮರಿಸುತ್ತಾ ಮುಂದಿನ ಕೆಲಸಕ್ಕೆ ಹಾಜರಾಗುತ್ತೇನೆ, ನಮ್ಮ ಪಕ್ಷದಿಂದ ನೀಡಿದ ಭಾಗ್ಯ ಗಳನ್ನು ಬಿ ಜೆ ಪಿ ಅವರು ಉಪಯೋಗಿಸಿಕೊಳ್ಳುತ್ತಿದ್ದರು ಟೀಕೆ ಮಾಡುತ್ತಿರುವುದು ಎಷ್ಟು ಸರಿ, ಅಲ್ಲದೇ ದೇವರಾಜು ಅರಸು ನಂತರ ಬಡವರ ದೀನದಲಿತರ ಪರ ಕೆಲಸ ಮಾಡುತ್ತಿರುವುದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಅವರು ತಿಳಿಸಿದರು.ಅರಗು ಬಣ್ಣ ಮತ್ತು ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್ ಎ ವೆಂಕಟೇಶ್ ಮಾತನಾಡಿ ಸನ್ಮಾನಗಳೆಂದರೆ ಭಯ ಮೂಡುತ್ತಿದೆ, ಅಲ್ಲದೇ ಸಾಧಕರನ್ನು ಗುರುತಿಸಿ ಸನ್ಮಾನಿಸಿದರೆ ಅವರ ಪ್ರತಿಬಿಂಬ ಸಮಾಜದ ಮೇಲೆ ಬೀರುತ್ತದೆ, ಗೌರವ ಸ್ವೀಕಾರ ಮಾಡುವುದು ಅಷ್ಟು ಸುಲಭವಲ್ಲ ಯಾಕಂದರೆ ಅದನ್ನು ಪಡೆದುಕೊಳ್ಳುವುದಕ್ಕೆ ಸಾಮಾನ್ಯವಾಗಿ ಮುಜುಗರ ಕೂಡ ಉಂಟಾಗುವುದು ಸಹಜಅರ್ಹರಿಗೆ ಸನ್ಮಾನ ಮಾಡಬೇಕೆ ಹೊರತು ಅರ್ಹದಲ್ಲದವರಿಗೆ ಮಾಡಿದರೆ ಅದು ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುವ ಸಂಭವ ಮೂಡುತ್ತದೆ ಎಂದರು.

ಅರಸು ಅವರು ತಮ್ಮಜಾತಿಯನ್ನು ನೋಡಿಲ್ಲ, ಅವರು ಭೂ ಸುಧಾರಣೆ ತರುವಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದವರು, ಅಲ್ಲದೇ ದೇವರಾಜು ಅವರು ಮುಖ್ಯಮಂತ್ರಿ ಆದಾಗ ಎಲ್ಲ ಹಿಂದುಳಿದ ವರ್ಗದವರಿಗೆ ಶಿಕ್ಷಣ, ಉನ್ನತ್ತ ಸ್ಥಾನ ಸಿಗುವಂತೆ ಮಾಡಿದ್ದಂತಹ ಉತ್ರಮವಾದ ವ್ಯಕ್ತಿಯಾಗಿದ್ದರು. ಆದರೆ ಅರಸು ಜನಾಂಗವನ್ನು ಹಿಂದುಳಿದವರ ಪಟ್ಟಿಗೆ ಸೇರಿಸಲಿಲ್ಲ ಎಂದು ಅವರು ಹೇಳಿದರು.

ಹಾಲಿ ಇರುವ ಮೀಸಲಾತಿ 1994 ರೂಪಿಸಿದ್ದು, ಇದು ಅವೈಜ್ಞಾನಿಕವಾಗಿದೆ. ಅರಸು ನಂತರ ಯಾವುದೇ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸುವ ಧೈರ್ಯ ಮಾಡಿಲ್ಲ. ಈಗಿನ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸ್ವೀಕರಿಸಿ, ವೈಜ್ಞಾನಿಕವಾದ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಜಿ. ಭೀಮೇಶ್ವರ ಜೋಶಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾರಂಗವೂ ಮುಖ್ಯ. ಪತ್ರಿಕಾರಂಗ ಸರಿಯಾಗಿ ಕೆಲಸ ಮಾಡಿದರೆ ಸಮಾಜದ ಪರಿವರ್ತನೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.

ಸಮಾಜಕ್ಕೆ ಸ್ಫೂರ್ತಿ ತುಂಬುವ ಸಕಾರಾತ್ಮಕ ಸುದ್ದಿಗಳನ್ನು ಒಳಪುಟಗಳಲ್ಲಿ ಯಾವುದೇ ಮೂಲೆಯಲ್ಲಿ ಹಾಕಿ, ನಕಾರಾತ್ಮಕ ಪರಿಣಾಮ ಬೀರುವ ಸುದ್ದಿಗಳನ್ನು ಮುಖಪುಟದಲ್ಲಿ ಹಾಕುವುದನ್ನು ಬಿಡಬೇಕು ಎಂದು ಅವರು ಸಲಹೆ ಮಾಡಿದರು.

ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌಹಾರ್ದತೆ, ಸಮೃದ್ಧಿ ಒಡಮೂಡಲು ಮಾಧ್ಯಮಗಳು ದುಡಿಯಬೇಕು ಎಂದು ಅವರು ಕರೆ ನೀಡಿದರು.

ತವರು ಅರಸು ಸಂಸ್ಥೆ ಅದ್ಯಕ್ಷರೂ ಆದ ಬೆಂಗಳೂರಿನ ಶ್ರೀ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅಮರನಾಥ್ ರಾಜೇ ಅರಸ್ , ವಿಪ್ರ ಮುಖಂಡ ಬಿ.ಆರ್‌.ನಟರಾಜ್‌ ಜೋಯಿಸ್‌ ಇದ್ದರು. ಶತಮಾನೋತ್ಸವ ಸಂಭ್ರಮದ ಅರಸು ಮಂಡಳಿ ಅದ್ಯಕ್ಷ ಎಚ್ ಎಂ ಟಿ ಲಿಂಗರಾಜೇ ಅರಸ್ ಸ್ವಾಗತಿಸಿದರು. ಡಾ ಎಂ ಜಿ ಆರ್ ಅರಸ್ ಕಾರ್ಯಕ್ರಮ ನಿರೂಪಿಸಿದರು.ಧ್ವನಿಕೊಟ್ಟ ದಣಿ ಫ್ರಶಸ್ತಿ ಪಡೆದ ಸಾಧಕರು

ಹಿರಿಯ ಪತ್ರಕರ್ತರಾದ ಟಿ.ವಿ. ರಾಜೇಶ್ವರ್, ಅಂಶಿ ಪ್ರಸನ್ನಕುಮಾರ್, ಎಸ್.ಟಿ. ರವಿಕುಮಾರ್, ಕೆ. ನರಸಿಂಹಮೂರ್ತಿ, ಆರ್. ಕೃಷ್ಣ, ಛಾಯಾಗ್ರಾಹಕ ಎಂ.ಎ. ಶ್ರೀರಾಂ ಅವರಿಗೆ ಧ್ವನಿಕೊಟ್ಟ ದಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Share this article