ನರೇಗಲ್ಲ ಬಸ್‌ ನಿಲ್ದಾಣ ಸಮಸ್ಯೆಗಳ ಗೂಡು!

KannadaprabhaNewsNetwork |  
Published : Jan 18, 2025, 12:47 AM IST
17ಜಿಡಿಜಿ5 | Kannada Prabha

ಸಾರಾಂಶ

ಇಲ್ಲಿ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ಈ ಹಿಂದೆ ಸರಿಯಾದ ಸ್ಥಳದಲ್ಲಿ ನಿಲ್ಲಿಸುವಂತೆ ಸಾರಿಗೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ನಿಂಗರಾಜ ಬೇವಿನಕಟ್ಟಿ ನರೇಗಲ್ಲ

ಇಲ್ಲಿನ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಗೂಡಾಗಿದೆ. ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ ಏನೊಂದು ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಮಹಿಳಾ ವಿಶ್ರಾಂತಿ ಗೃಹ ಕಳೆದ 2 ವರ್ಷಗಳಿಂದ ಬೀಗ ಜಡಿಯಲಾಗಿದೆ. ವಾಹನಗಳ ವೇಳಾಪಟ್ಟಿ ಕಾಟಾಚಾರಕ್ಕೆಂಬಂತೆ ಚಿಕ್ಕ ಬ್ಯಾನರ್‌ನಲ್ಲಿ ಹಾಕಿಸಲಾಗಿದೆ. ಆದರೆ ಆ ಸ್ಥಳದಲ್ಲಿ ಸಾರ್ವಜನಿಕ ಭಿತ್ತಿಪತ್ರ ತುಂಬಿಕೊಂಡಿವೆ. ರಾತ್ರಿ ವೇಳೆ ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲದೇ ಕತ್ತಲು ಆವರಿಸುತ್ತದೆ.

ಎಲ್ಲೆಂದರಲ್ಲಿ ವಾಹನ:

ಇಲ್ಲಿ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ಈ ಹಿಂದೆ ಸರಿಯಾದ ಸ್ಥಳದಲ್ಲಿ ನಿಲ್ಲಿಸುವಂತೆ ಸಾರಿಗೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಖಾಸಗಿ ವಾಹನಗಳಿಗೆ ನಿಲ್ದಾಣದ ಆವರಣದಲ್ಲಿ ಪ್ರತ್ಯೇಕ ನಿಲುಗಡೆಗೆ ವ್ಯವಸ್ಥೆ ಇದ್ದರೂ ಅಲ್ಲಿ ವಾಹನ ನಿಲ್ಲಿಸದೇ ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ದ್ವಿ ಚಕ್ರವಾಹನಗಳು, ಜೀಪ್‌, ಟಂಟಂ ಟ್ರ್ಯಾಕ್ಸ್‌ನಂತಹ ವಾಹನಗಳು ನಿಲ್ಲುತ್ತಿವೆ.

ಶೌಚಾಲಯ ಗಬ್ಬು ನಾರುತ್ತಿದೆ. ನಿಲ್ದಾಣದಲ್ಲಿ ಶುಚಿತ್ವ ಮರೀಚಿಕೆಯಾಗಿದ್ದು, ಎಲ್ಲೆಂದರಲ್ಲಿ ಉಗುಳುವುದರಿಂದ ರಕ್ತದ ಕಲೆಗಳಂತೆ ಕಂಡುಬರುತ್ತಿದೆ. ಪ್ರಯಾಣಿಕರಿಗೆ ಧೂಳಿನ ಮಜ್ಜನ ಸಾಮಾನ್ಯ. ನಿಲ್ದಾಣ ಆವರಣದಲ್ಲಿ ಅಲ್ಲಲ್ಲಿ ಪ್ರಯಾಣಿಕರು ನಿಂತಿರುತ್ತಾರೆ. ಕುಳಿತುಕೊಳ್ಳುವ ಸ್ಥಿತಿ ಇಲ್ಲಿಲ್ಲ.

ಕಳೆದ ಕೆಲ ತಿಂಗಳಿಂದ ನಿಲ್ದಾಣದಲ್ಲಿ ನೀರಿಲ್ಲ. ಕೈ ತೊಳೆಯುವ ತೊಟ್ಟಿಯಲ್ಲಿ ಗುಟಖಾ ಚೀಟಿ, ಪ್ಲಾಸ್ಟಿಕ್ ರ್‍ಯಾಪರ್‌ ಕಂಡುಬರುತ್ತಿವೆ. ಅದರ ಪಕ್ಕದಲ್ಲಿಯೇ ಗುಂಡಿ ಇದ್ದು ಅದರಲ್ಲಿಯೂ ಕಸ ತುಂಬಿಕೊಂಡಿದೆ.

ನರೇಗಲ್ಲ ಬಸ್ ನಿಲ್ದಾಣ ನೆಲಸಮ ಮಾಡಿ ಹೊಸ ನಿಲ್ದಾಣ ನಿರ್ಮಿಸುವ ಕುರಿತು ಈಗಾಗಲೇ ಇಲಾಖಾ ಹಂತದ ಪರಿಶೀಲನೆ ನಡೆದಿದೆ. ಸದ್ಯ ಸಣ್ಣಪುಟ್ಟ ಸಮಸ್ಯೆ ಅಲ್ಲಿನ ಕಂಟ್ರೋಲರ್ ಗಮನಕ್ಕೆ ತಂದು ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು ರೋಣ ಡಿಪೋ ಮ್ಯಾನೇಜರ್‌ ಎಂ.ಎಂ. ಎಕ್ಸಂಬಿ ತಿಳಿಸಿದ್ದಾರೆ.

PREV

Recommended Stories

ಒಳ ಮೀಸಲು ಸಿದ್ದರಾಮಯ್ಯ ಚಿತ್ರಕ್ಕೆ ಹಾಲಿನ ಅಭಿಷೇಕ
ವಿಧಾನಸಭೆ ಒಪ್ಪಿದ್ದ 9 ವಿಧೇಯಕಗಳು ಪರಿಷತ್‌ನಲ್ಲೂ ಪಾಸ್‌