ವಿಶೇಷ ವರದಿ ಗದಗ
ಜಿಲ್ಲೆಯ ನರೇಗಲ್ಲ ಹೋಬಳಿಯ ಪಟ್ಟಣ ಮತ್ತು ಸುತ್ತಮುತ್ತಲ ಹಲವಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ, ಗರಸು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಸ್ಥಳೀಯ ಪ್ರಭಾವಿಗಳು, ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ರಾಜಾರೋಷವಾಗಿ ಈ ಅಕ್ರಮ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಿವ್ಯಮೌನ ವಹಿಸಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟವಾಗುತ್ತಿದೆ.ನರೇಗಲ್ ಪಟ್ಟಣದ ಸಮೀಪದಲ್ಲಿರುವ ಪ್ರವಾಸಿ ಮಂದಿರ ಹಿಂಭಾಗ, ಕೋಡಿಕೊಪ್ಪ, ಜಕ್ಕಲಿ ಗ್ರಾಮದ ರಸ್ತೆ, ಬಂಡಿಹಾಳ ಗ್ರಾಮ ರಸ್ತೆ, ನರೇಗಲ್ ದಿಂದ ಗಜೇಂದ್ರಗಡ ರಸ್ತೆ ಸೇರಿದಂತೆ ಹೋಬಳಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಈ ಅಕ್ರಮ ನಡೆಯುತ್ತಿದೆ. ಲಾರಿ ಸಾಗಾಟದ ಭಾರಕ್ಕೆ ರಸ್ತೆಗಳು ಹಾಳಾಗುತ್ತಿದ್ದು, ಈ ಬಗ್ಗೆ ನಾವು ಯಾರಿಗೂ ಹೇಳುವಂತಿಲ್ಲ. ಕಾರಣ ಈ ಅಕ್ರಮ ನಡೆಸುತ್ತಿರುವವರು ಅತ್ಯಂತ ಪ್ರಭಾವಿಗಳು, ಇದರ ಬಗ್ಗೆ ಮಾತನಾಡಿದರೆ ಸಾಕು ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಗ್ರಾಮಗಳ ಜನರು.
ರಸ್ತೆಗಳಿಗೆ ಹಾನಿ:ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಗಾಳಿ ವಿದ್ಯುತ್ ಉತ್ಪಾದನಾ ಯಂತ್ರ ಅಳವಡಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೊಡ್ಡ ಅಕ್ರಮವೇ ನಡೆಯುತ್ತಿದೆ. ರಾತ್ರಿ ಹಗಲು ಎನ್ನದೇ 50 ಕ್ಕೂ ಅಧಿಕ ಲಾರಿಗಳು ಅಕ್ರಮ (ಗರಸು) ಗಣಿಗಾರಿಕೆ ಮಣ್ಣನ್ನು ಜಿಲ್ಲೆಯಾದ್ಯಂತ ಸಾಗಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನ ನೀಡುತ್ತಿಲ್ಲ, ಪ್ರತಿಯೊಂದು ಲಾರಿಗಳು ನರೇಗಲ್ಲ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಹಾಯ್ದು ಹೋದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತ ಪ್ರದರ್ಶನ ಮಾಡುತ್ತಿರುವುದು ಕೂಡಾ ಹಲವು ಸಂಶಯಕ್ಕೆ ಕಾರಣವಾಗಿದೆ.ಅಧಿಕಾರಿಗಳಿಂದ ಸಿದ್ಧ ಉತ್ತರ: ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಸಿದ್ಧ ಉತ್ತರ ನೀಡುತ್ತಿದ್ದು, ನಾವು ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ. ಅಂತಹ ಯಾವುದೇ ಸಮಸ್ಯೆಗಳು ಇಲ್ಲ, ಸಮಸ್ಯೆ ಕಂಡು ಬಂದಲ್ಲಿ ವಿಶೇಷ ಗಮನ ನೀಡಲಾಗುವುದು ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಹಾಗೂ ಅವರ ಹಿಂಬಾಲಕರ ಒತ್ತಡದಲ್ಲಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ನರೇಗಲ್ ವ್ಯಾಪ್ತಿಯಲ್ಲಿ ಅಕ್ರಮ ಗರಸು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಕಂಡ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ ತಿಳಿಸಿದ್ದಾರೆ.