- ಏ.1ರಿಂದಲೇ ಅನಿರ್ದಿಷ್ಟಾವಧಿ ಧರಣಿ: ಆಲೂರು ಲಿಂಗರಾಜ । ಈಗಾಗಲೇ ₹3 ಕೋಟಿ ಬಿಡುಗಡೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಭೂಮಿಪೂಜೆ ನೆರವೇರಿಸದಿದ್ದರೆ, ಏ.1ರಿಂದಲೇ ಮಹಾನಗರ ಪಾಲಿಕೆ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಸ್ವಾಭಿಮಾನಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿ ಮುಖಂಡ ಆಲೂರು ನಿಂಗರಾಜ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದಲೂ ಅಂಬೇಡ್ಕರ್ ಭವನ ನಿರ್ಮಾಣದ ವಿಚಾರ ನನೆಗುದಿಗೆ ಬಿದ್ದಿದೆ. ₹5 ಕೋಟಿ ಅನುದಾನ ಇದಕ್ಕೆಂದೇ ಮೀಸಲಿಟ್ಟಿದ್ದು, ₹3 ಕೋಟಿ ಸಹ ಬಿಡುಗಡೆಯಾಗಿದೆ. ಹೀಗಿದ್ದರೂ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಂದು 6 ವರ್ಷಗಳೇ ಕಳೆದಿವೆ. ಆಡಳಿತ ಯಂತ್ರ ಮಾತ್ರ ಕಾಮಗಾರಿ ನಡೆಸಲು ಮೀನ-ಮೇಷ ಎಣಿಸುತ್ತಿದೆ. ಈವರೆಗೆ ಸಮಾಧಾನದಿಂದ ಕಾದಿದ್ದೇವೆ. ಏ.1ರಿಂದಲೇ ಅನಿರ್ದಿಷ್ಟಾವಧಿ ಧರಣಿ ಮೂಲಕ ಅಂಬೇಡ್ಕರ್ ಭವನ ನಿರ್ಮಿಸುವಂತೆ ಹೋರಾಟ ಶುರು ಮಾಡಲಿದ್ದೇವೆ. ಪಾಲಿಕೆ ಎದುರು ಗುದ್ದಲಿ ಪೂಜೆ ಮಾಡಿ, ಇಲ್ಲವೇ ಕುರ್ಚಿ ಬಿಡಿ ಘೋಷಣೆಯೊಂದಿಗೆ ಹೋರಾಟ ಶುರು ಮಾಡಲಿದ್ದೇವೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದರು.ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಅನೇಕ ಮುಖಂಡರು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇವೆ. 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಹೈಸ್ಕೂಲ್ ಮೈದಾನದಲ್ಲಿ ಕಪ್ಪು ಬಟ್ಟೆ ಪ್ರದರ್ಶಸಿ, ಗಮನ ಸೆಳೆದಿದ್ದೆವು. ಆಗ ಸ್ಥಳದಲ್ಲೇ ₹3 ಕೋಟಿ ಮಂಜೂರು ಮಾಡಿದ್ದರು. ಆದರೆ, ಭವನ ಮಾತ್ರ ಇಂದಿಗೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರದಲ್ಲಿ ಇಷ್ಟು ವರ್ಷವಾದರೂ ಅಂಬೇಡ್ಕರ್ ಭವನವೇ ಇಲ್ಲ. ಅಂಬೇಡ್ಕರ ಭವನದ ಜಾಗದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದು, ಅಂತಿಮವಾಗಿ ಸರ್ಕ್ಯೂಟ್ ಹೌಸ್ ಬಳಿ ಜಾಗ ನಿಗದಿಪಡಿಸಿ, ಅಂತಿಮಗೊಳಿಸಲಾಗಿದೆ. ಈಗ ಯಾವುದೇ ರೀತಿಯ ಸಬೂಬು ಹೇಳಬಾರದು. ಏ.14ರಂದು ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನದಂದೇ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಇಚ್ಛಾಶಕ್ತಿ, ಬದ್ಧತೆ ತೋರಬೇಕು ಎಂದು ಆಲೂರು ನಿಂಗರಾಜ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಾಬನೂರು ರಾಜು, ಅಂಜಿನಪ್ಪ ಶಾಬನೂರು, ಕರಿಯಪ್ಪ ಆವರಗೆರೆ, ಎಂ.ಹರೀಶ ಇತರರು ಇದ್ದರು.
- - -ಕೋಟ್ ದಾವಣಗೆರೆಯು ಜಿಲ್ಲೆಯಾಗಿ 3 ದಶಕಗಳೇ ಕಳೆಯುತ್ತಿದ್ದರೂ, ಅಂಬೇಡ್ಕರ್ ಭವನ ಮಾತ್ರ ಇಂದಿಗೂ ಆಗಿಲ್ಲ. ಅಂಬೇಡ್ಕರ್ ಭವನಕ್ಕಾಗಿ ಪಕ್ಷಬೇಧ ಮರೆತು, ಎಲ್ಲ ಜಾತಿ, ಸಮುದಾಯ, ಸಂಘಟನೆಗಳ ಮುಖಂಡರೂ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಥಮ ಆದ್ಯತೆ ಮೇಲೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಬೇಕು
- ಆಲೂರು ನಿಂಗರಾಜ, ಮುಖಂಡ- - - -18ಕೆಡಿವಿಜಿ61.ಜೆಪಿಜಿ:
ದಾವಣಗೆರೆಯಲ್ಲಿ ಮಂಗಳವಾರ ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿ ಮುಖಂಡ ಆಲೂರು ನಿಂಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರು ಇದ್ದರು.