ನರೇಗಲ್ಲ ಕಾಮಣ್ಣನಿಗೀಗ 320 ವರ್ಷ !

KannadaprabhaNewsNetwork |  
Published : Mar 22, 2024, 01:03 AM IST
ರತಿ-ಕಾಮಣ್ಣರೊಂದಿಗೆ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳು | Kannada Prabha

ಸಾರಾಂಶ

ಭಕ್ತಿಯಿಂದ ಕಾಮಣ್ಣನ ಪೂಜೆ ಮಾಡಿದರೆ ಭಕ್ತರ ಸಕಲಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಪಟ್ಟಣ ಮತ್ತು ಸುತ್ತಲಿನ ಜನರಲ್ಲಿದೆ. ಭಕ್ತರ ಕಾಮಧೇನು ಆಗಿರುವ ಈ ಕಾಮಣ್ಣ ಐದು ದಿನಗಳ ಕಾಲ (25ರ ವರೆಗೆ) ದರ್ಶನಾಶೀರ್ವಾದ ನೀಡಲಿದ್ದಾನೆ

ನಿಂಗರಾಜ ಬೇವಿನಕಟ್ಟಿ ನರೇಗಲ್ಲ

ಇಲ್ಲಿಯ ಹಳೆ ಬಸ್ ನಿಲ್ದಾಣದ ಡಾ.ಕಾಳೆ ಆಸ್ಪತ್ರೆಯ ಹತ್ತಿರ ಪ್ರತಿಷ್ಠಾಪಿಸಲ್ಪಟ್ಟಿರುವ ಕಾಮಣ್ಣನಿಗೆ ಈಗ ಭರ್ತಿ 320 ವರ್ಷ! ಪ್ರತಿ ಮೂರು ವರ್ಷಕ್ಕೊಮ್ಮೆ ಇಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಈ ಬಾರಿ ಮಾ.21 ರಿಂದ 25 ರ ವರೆಗೂ ಕಾಮಣ್ಣನ ಪೂಜೆ ನಡೆಯುತ್ತದೆ.

320 ವರ್ಷಗಳ ಹಿಂದೆ ರೈಲು ಮೂಲಕ ನರೇಗಲ್ಲಿಗೆ ಬಂದ ಈ ರತಿ-ಕಾಮಣ್ಣರ ಮೂರ್ತಿಗಳನ್ನು ನರೇಗಲ್ಲದ ಹಿರಿಯರು ಹರ್ಲಾಪುರದ ರೈಲು ನಿಲ್ದಾಣದಿಂದ ನರೇಗಲ್ಲಿಗೆ ಕರೆ ತಂದಿದ್ದಾರೆ ಎಂದು ಇಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಇಷ್ಟಾರ್ಥ ಸಿದ್ದಿ: ಭಕ್ತಿಯಿಂದ ಕಾಮಣ್ಣನ ಪೂಜೆ ಮಾಡಿದರೆ ಭಕ್ತರ ಸಕಲಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಪಟ್ಟಣ ಮತ್ತು ಸುತ್ತಲಿನ ಜನರಲ್ಲಿದೆ. ಭಕ್ತರ ಕಾಮಧೇನು ಆಗಿರುವ ಈ ಕಾಮಣ್ಣ ಐದು ದಿನಗಳ ಕಾಲ (25ರ ವರೆಗೆ) ದರ್ಶನಾಶೀರ್ವಾದ ನೀಡಲಿದ್ದಾನೆ. ರತಿ-ಕಾಮರ ಜತೆಗೆ ಇಲ್ಲಿ ಪರಮೇಶ್ವರ, ಋಷಿ ಮುನಿಗಳು, ರಾಜ, ಮನ್ಮಥ್, ರಾಣಿ, ಕೊರವ ಮತ್ತು ಮಂಗ ಎಂಬ ಇತರೆ ಹತ್ತು ಗೊಂಬೆಗಳನ್ನು ಕೂಡಿಸಲಾಗುತ್ತಿದೆ. ಈ ಹಿಂದೆ ಉಡಿ ತುಂಬಿ ಹರಕೆ ಹೊತ್ತ ತಾಯಂದಿರು ಕಾಮಣ್ಣನಿಗೆ ಸೀರೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಪ್ರತಿ ದಿನ ಎರಡು ಬಾರಿ ಪೂಜೆ ಸಲ್ಲಿಸಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸಿ ದರ್ಶನ ಪಡೆಯುತ್ತಾರೆ.

ಮಾ. 26 ರಂದು ಬೆಳಗ್ಗೆ 7 ಗಂಟೆಗೆ ಅಪರೂಪದ ವೇಷಭೂಷಣ (ಸೋಗು) ಹಾಕಿಕೊಂಡು ಟ್ರ್ಯಾಕ್ಟರ್‌ನಲ್ಲಿ ಬಣ್ಣ ತುಂಬಿದ ಪಾತ್ರೆ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತ ಹೋಳಿ ಆಟ ಆಡಲಾಗುತ್ತದೆ.

ನರೇಗಲ್ಲನ ಕಾಮಣ್ಣನಿಗೆ 320 ವರ್ಷಗಳ ಇತಿಹಾಸವಿದ್ದು, ಇಲ್ಲಿ ಭಕ್ತಿಯಿಂದ ಬೇಡಿಕೊಂಡು ದೇವರಿಗೆ ಉಡಿ ತುಂಬಿದರೆ, ಕಂಕಣ ಭಾಗ್ಯ ಸೇರಿದಂತೆ ಇತರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹೀಗಾಗಿ ಈ ಐದು ದಿನಗಳ ಕಾಲ ರತಿ-ಕಾಮಣ್ಣರಿಗೆ ಉಡಿ ತುಂಬಲು ದೊಡ್ಡ ಸಾಲೇ ನೆರೆದಿರುತ್ತದೆ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ಧತಿಯನ್ನು ನಾವುಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಶಶಿಧರ ಸಂಕನಗೌಡ್ರ, ಉಮೇಶ ಕೊತಬಾಳ, ಗವಿಸಂಗಪ್ಪ ದಿಂಡೂರ, ಮೈಲಾರಪ್ಪ ಗೋಡಿ, ಶೇಖಪ್ಪ ಜುಟ್ಲ, ಸುರೇಶ ಹುನಗುಂದ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ