ಪ್ರಧಾನಿ ಮೋದಿಯಿಂದ ದೇಶ ಕಟ್ಟುವ ಕಾರ್ಯ

KannadaprabhaNewsNetwork | Published : Apr 1, 2024 12:48 AM

ಸಾರಾಂಶ

ಮೋದಿ ಪ್ರಧಾನಿಯಾದ ನಂತರ ಇಡೀ ದೇಶದಲ್ಲಿನ ನಿರಾಶ್ರಿತರಿಗೆ ಸುಮಾರು 4 ಕೋಟಿ ಹಾಗೂ ಕರ್ನಾಟಕ ರಾಜ್ಯದಲ್ಲಿ 8 ಲಕ್ಷ ಆಶ್ರಯ ಮನೆ ನೀಡಲಾಗಿದೆ

ಮುಂಡರಗಿ: ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಆಹಾರ ಉತ್ಪಾದನೆ ಹೆಚ್ಚಳವಾಗಿ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ನಾವು ಇಂದು 5ನೇ ಸ್ಥಾನಕ್ಕೆ ಬಂದು ತಲುಪಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯ ಆದಾಯ ಹೆಚ್ಚಾಗಿದೆ. ಜನರ ಬದುಕು ಕಟ್ಟುವಂತಹ, ದೇಶ ಕಟ್ಟುವಂತಹ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಭಾನುವಾರ ಲೋಕಸಭಾ ಚುನಾವಣೆ ಅಂಗವಾಗಿ ಮುಂಡರಗಿ ಹೋಬ‍ಳಿಯ ಕೊರ್ಲಹಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸುವ ಮೂಲಕ ಮತದಾರರಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ಮೋದಿ ಪ್ರಧಾನಿಯಾದ ನಂತರ ಇಡೀ ದೇಶದಲ್ಲಿನ ನಿರಾಶ್ರಿತರಿಗೆ ಸುಮಾರು 4 ಕೋಟಿ ಹಾಗೂ ಕರ್ನಾಟಕ ರಾಜ್ಯದಲ್ಲಿ 8 ಲಕ್ಷ ಆಶ್ರಯ ಮನೆ ನೀಡಲಾಗಿದೆ. ಉಜ್ವಲ್ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಪ್ರತಿ ಮನೆ ಮನೆಗೂ ಜಲ ಜೀವನ್ ಮಷೀನ್ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ತಲುಪಿಸಲಾಗುತ್ತಿದೆ. ಮನೆ ಮನೆಗೆ ಶುದ್ಧ ನೀರನ್ನು ಕೊಡಲು ಕಾಂಗ್ರೆಸ್ ಗೆ 75 ವರ್ಷ ಬೇಕಾಯಿತು. ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದರೂ ಮಾಡದಂತಹ ಕಾರ್ಯ ಮೋದಿ ಅವರು 10 ವರ್ಷದಲ್ಲಿ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಮುಖಂಡರಾದ ಉಮೇಶಗೌಡ ಪಾಟೀಲ, ಲಿಂಗರಾಜಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕೊಟ್ರೇಶ ಅಂಗಡಿ, ವೀರಣ್ಣ ತುಪ್ಪದ, ಎಚ್.ವಿರುಪಾಕ್ಷಗೌಡ, ರವಿ ದಂಡಿನ, ಭೀಮಸಿಂಗ್ ರಾಠೋಡ, ಕುಮಾರಸ್ವಾಮಿ ಹಿರೇಮಠ, ಮಂಜುನಾಥಗೌಡ ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ, ಬಸವರಾಜ ಬಿಳಿಮಗ್ಗದ, ರಜನೀಕಾಂತ ದೇಸಾಯಿ, ಬುಟ್ಟು ಹೊಸಮನಿ, ಚಿನ್ನಪ್ಪ ವಡ್ಡಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article