ಪರೀಕ್ಷೆಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತರಬೇತಿ

KannadaprabhaNewsNetwork |  
Published : Sep 20, 2024, 01:31 AM IST
51 | Kannada Prabha

ಸಾರಾಂಶ

- ಸರ್ಕಾರಿ ಪಿಯು ಕಾಲೇಜಿನಲ್ಲಿ ಸಿಇಟಿ, ನೀಟ್‌ ತರಬೇತಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಹುಣಸೂರು

ಸಿಇಟಿ, ನೀಟ್ ಮತ್ತು ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ತರಬೇತಿ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಲು ತೀರ್ಮಾನಿಸಿದ್ದೇನೆ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ, ಶಿಕ್ಷಕರ ದಿನಾಚರಣೆ ಮತ್ತು ಸಿಇಟಿ, ನೀಟ್ ತರಬೇತಿಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಎಚ್.ಎನ್. ಗಿರೀಶ್ ಈ ಸಾಲಿನ ಅತ್ಯುತ್ತಮ ಉಪನ್ಯಾಸಕರೆಂದು ರಾಷ್ಟ್ರಪ್ರಶಸ್ತಿ ಗಳಿಸಿದ್ದರೆ, ಅತ್ಯುತ್ತಮ ಪ್ರಾಂಶುಪಾಲರಾಗಿ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ಅವರನ್ನು ರಾಜ್ಯ ಸರ್ಕಾರ ಸನ್ಮಾನಿಸಿದೆ. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳೆರಡೂ ಈ ಕಾಲೇಜಿಗೆ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇದೀಗ ನಾನು ವಿದ್ಯಾರ್ಥಿಗಳಿಂದ ಇಂತಹ ಸಾಧನೆಯ ನಿರೀಕ್ಷೆಯಲ್ಲಿದ್ದೇನೆ. ಸಾಧಿಸಲು ನಿಮ್ಮಲ್ಲಿ ಅವಿರತ ಶ್ರಮವಿರಬೇಕು. ನಿಮ್ಮ ಗುರುಗಳ ಸಾಧನೆಯೆ ನಿಮಗೆ ಪ್ರೇರಣೆಯಾಗಬೇಕು ಎಂದರು.

ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 1,300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳ ಸದ್ಬಳಕೆಯ ಕುರಿತು ಆಲೋಚಿಸಲಿ. ಹೆಣ್ಣು ಹೆತ್ತ ತಂದೆ- ತಾಯಂದಿರು ತಲೆಎತ್ತಿ ನಡೆಯುವಂತೆ ನೋಡಿಕೊಳ್ಳಿರಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತವಾಗಿ ಕಾಲೇಜಿನಲ್ಲಿ ಸಿಇಟಿ, ನೀಟ್ ಮುಂತಾದ ತರಬೇತಿ ತರಗತಿಗಳನ್ನು ನೀಡುತ್ತಿದ್ದು, ಇದು ಇನ್ನಷ್ಟು ಪರಿಣಾಮಕಾರಿಯಾಗಲು ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸೇರಿದಂತೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಿದ್ದೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಕಲಿಕೆಯಲ್ಲಿ ಶ್ರದ್ಧೆ, ಶ್ರಮ ಮತ್ತು ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಕಾಲೇಜಿನ ಅಭಿವೃದ್ಧಿಗಾಗಿ ಈ ಸಾಲಿಗಾಗಿ 5 ಲಕ್ಷ ರು.ಗಳು ಮತ್ತು ಮುಂದಿನ ಏಪ್ರಿಲ್ ನಂತರ ಮತ್ತೆ 5 ಲಕ್ಷ ರು.ಗಳನ್ನು ನೀಡುತ್ತೇನೆ. ಹುಣಸೂರಿನಲ್ಲಿ ವ್ಯಾಸಂಗ ಮಾಡಿರುವ ನನ್ನನ್ನು ಹುಣಸೂರಿನ ಜನ ಈ ಎತ್ತರಕ್ಕೆ ಬೆಳೆಸಿದ್ದಾರೆ. ನನ್ನೂರಿನ ಜನರಿಗಾಗಿ ನಾನು ಸೇವೆ ನೀಡಲು ಸದಾ ಸಿದ್ಧ ಎಂದರು.

ರಾಷ್ಟ್ರಪ್ರಶಸ್ತಿ ವಿಜೇತ ಎಚ್.ಎನ್. ಗಿರೀಶ್, ರಾಜ್ಯಪ್ರಶಸ್ತಿ ವಿಜೇತ ರಾಮೇಗೌಡ, ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿ ವಿಜೇತರಾದ ಮಂಜುಳಾ, ಹರೀಶ್ ಮತ್ತು ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು. ನಗರಸಭಾಧ್ಯಕ್ಷ ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಹರೀಶ್, ಕಾಲೇಜು ಅಬಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಕೆ. ಕೃಷ್ಣ, ಅಸ್ವಾಳ್ ಕೆಂಪೇಗೌಡ, ಮಮತ ಗಜೇಂದ್ರ, ಅಧ್ಯಾಪಕರು, ವಿದ್ಯಾರ್ಥಿನಿಯರು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ