ಪೌರ ಕಾರ್ಮಿಕರ ಶ್ರಮಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

KannadaprabhaNewsNetwork |  
Published : Sep 24, 2026, 01:30 AM IST
23ಕೆಡಿವಿಜಿ5-ದಾವಣಗೆರೆಯಲ್ಲಿ ಬುಧವಾರ ಪಾಲಿಕೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2026 ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ. ...............23ಕೆಡಿವಿಜಿ6-ದಾವಣಗೆರೆಯಲ್ಲಿ ಬುಧವಾರ ಪಾಲಿಕೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2026 ಸಮಾರಂಭದಲ್ಲಿ ಹಿರಿಯ ಪೌರ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಸಾಧಕ ಮಕ್ಕಳನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸನ್ಮಾನಿಸಿದರು. | Kannada Prabha

ಸಾರಾಂಶ

ದಾವಣಗೆರೆ ಮಹಾನಗರ ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಮತ್ತು ಗೌರವ ಪಡೆಯಲು ಪೌರ ಕಾರ್ಮಿಕರ ಪರಿಶ್ರಮವೇ ಕಾರಣ‍ವಾಗಿದ್ದು, ನಿತ್ಯವೂ ನಸುಕಿನ 2.30ರಿಂದಲೇ ಕುಟುಂಬವನ್ನು ತೊರೆದು ಕರ್ತವ್ಯಕ್ಕೆ ಹಾಜರಾಗುವ ಪೌರ ಕಾರ್ಮಿಕರ ಸೇವೆ ಅನನ್ಯ, ಅವಿಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಮಹಾನಗರ ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಮತ್ತು ಗೌರವ ಪಡೆಯಲು ಪೌರ ಕಾರ್ಮಿಕರ ಪರಿಶ್ರಮವೇ ಕಾರಣ‍ವಾಗಿದ್ದು, ನಿತ್ಯವೂ ನಸುಕಿನ 2.30ರಿಂದಲೇ ಕುಟುಂಬವನ್ನು ತೊರೆದು ಕರ್ತವ್ಯಕ್ಕೆ ಹಾಜರಾಗುವ ಪೌರ ಕಾರ್ಮಿಕರ ಸೇವೆ ಅನನ್ಯ, ಅವಿಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಶ್ಲಾಘಿಸಿದರು.

ನಗರದ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಬುಧವಾರ ದಾವಣಗೆರೆ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ, ಜನರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಪರಿಶ್ರಮದಿಂದಲೇ ಪ್ರಶಸ್ತಿ ಗೌರವ ಮಹಾನಗರ ಪಾಲಿಕೆ ಮುಡಿಗೇರಿದ್ದು, ಪೌರ ಕಾರ್ಮಿಕರೇ ಸಮಾಜದ ಪ್ರಮುಖ ಶಕ್ತಿಯಾಗಿದ್ದಾರೆ ಎಂದರು.

ಪೌರ ಕಾರ್ಮಿಕರ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಎಲ್ಲಾ ನೆರವು, ಸಹಕಾರ ನೀಡಲು ಪಾಲಿಕೆ ಮತ್ತು ಸರ್ಕಾರ ಸಂಪೂರ್ಣ ಬದ್ಧವಾಗಿವೆ. ಪೌರ ಕಾರ್ಮಿಕರು ತಮ್ಮ ಕುಟುಂಬ ಮತ್ತು ಮಕ್ಕಳ ಹಿತದೃಷ್ಟಿಯಿಂದ ದುಶ್ಚಟಗಳಿಂದ ದೂರವಿದ್ದು, ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ನಗರ ಪಾಲಿಕೆಯಿಂದ ನಿರಂತರ ಆರೋಗ್ಯ ತಪಾಸಣೆ, ಶುಚಿತ್ವ ಕಾಪಾಡಿಕೊಳ್ಳಲು ಶೂ, ಸಮವಸ್ತ್ರ, ಬೆಳಗಿನ ಉಪಹಾರ, ವಿಶೇಷ ಭತ್ಯೆ, ಕ್ರೀಡಾ ಚಟುವಟಿಕೆಗಳ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಪೌರ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು, ಸಮಾಜದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು. ಈಗಾಗಲೇ ಪಾಲಿಕೆಯಿಂದ ಪೌರ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ ಸೇರಿದಂತೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿದೆ. ಅದನ್ನು ಸದ್ಭಳಕೆ ಮಾಡಿಕೊಂಡು ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕು ಎಂದು ಕರೆ ನೀಡಿದರು.

ಪಾರ ಕಾರ್ಮಿಕರನ್ನು ಖಾಯಂಗೊಳಿಸುವ, ನೇರ ಪಾವತಿ ವ್ಯಾಪ್ತಿಗೆ ತರುವ ಹೆಸರಲ್ಲಿ ಕೆಲ ಮಧ್ಯವರ್ತಿಗಳು ಮತ್ತು ಅನಧಿಕೃತ ಏಜೆಂಟರು ಸಾರ್ವಜನಿಕರು, ಪೌರ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬರುತ್ತಿವೆ. ಈಗಾಗಲೇ ಪೊಲೀಸ್ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ. ಸಮಗ್ರ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ನೇರ ಪಾವತಿ ಹಾಗೂ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮ್ಯಾನ್‌ ಹೋಲ್ ಹಾಗೂ ಚರಂಡಿಗಳಿಗೆ ಭೌತಿಕವಾಗಿ ಇಳಿದು ಸ್ವಚ್ಛಗೊಳಿಸುವ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯವನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮ್ಯಾನ್‌ಹೋಲ್‌ಗಳಲ್ಲಿ ಅಪಾಯಕಾರಿ ಮಿಥೇನ್ ಅನಿಲ, ಆಮ್ಲಜನಕದ ಅಭಾವ ಹಾಗೂ ರೋಗಕಾರಕ ಬ್ಯಾಕ್ಟೀರಿಯಾಗಳಿರುವುದರಿಂದ ಜೀವಕ್ಕೂ ಕಂಟಕವಿರುತ್ತದೆ. ಹಾಗಾಗಿ ಯಾರೂ ಸಹ ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದು. ಸ್ವಚ್ಛತಾ ಕಾರ್ಯಕ್ಕೆ ಜೆಟ್ಟಿಂಗ್ ಮಿಷನ್ ಸೇರಿದಂತೆ ಲಭ್ಯವಿರುವ ಆಧುನಿಕ ಯಂತ್ರೋಪಕರಣಗಳನ್ನು ಮಾತ್ರವೇ ಬಳಸಬೇಕು. ಪಾಲಿಕೆ ಅಧಿಕಾರಿ, ಸಿಬ್ಬಂದಿ ಸಹ ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಪಾಲಿಕೆ ಆಯುಕ್ತ ಡಾ.ಮಹಾಂತೇಶ, ದೂಡಾ ಆಯುಕ್ತೆ ರೇಣುಕಾ, ಪಾಲಿಕೆ ಉಪ ಆಯುಕ್ತೆ ಮಂಜುಳಾದೇವಿ, ಲೆಕ್ಕಾಧಿಕಾರಿ ಪ್ರಿಯಾಂಕ, ಕಾರ್ಯ ಪಾಲಕ ಅಭಿಯಂತರ ಉದಯಕುಮಾರ, ಎಇಇ ಅಭಿಷೇಕ, ಪೌರ ಕಾರ್ಮಿಕರ ಸಂಘಟನೆ ಮುಖಂಡರಾದ ಎಲ್.ಎಂ.ಹನುಮಂತಪ್ಪ, ಎಲ್,ಡಿ. ಗೋಣೆಪ್ಪ, ಎಲ್.ಎಚ್.ಸಾಗರ್ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಸಂಘಟನೆ ಮುಖಂಡರು, ಪೌರ ಕಾರ್ಮಿಕರು, ಕುಟುಂಬ ವರ್ಗದವರು ಇದ್ದರು. ಇದೇ ವೇಳೆ ಹಿರಿಯ ಪೌರ ಕಾರ್ಮಿಕರನ್ನು, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.

--

ದೈಹಿಕ, ಮಾನಸಿಕ ಆರೋಗ್ಯ ಹಾಗೂ ಶಿಸ್ತನ್ನು ಕಾಯ್ದುಕೊಳ್ಳುವ ಮೂಲಕ ಪೌರ ಕಾರ್ಮಿಕರು ತಮ್ಮ ಕುಟುಂಬದ ಭವಿಷ್ಯವನ್ನು ರೂಪಿಸಿಕೊಳ್ಳುವ ಕಡೆಗೂ ಗಮನ ಹರಿಸಬೇಕು. ಇದರ ಜೊತೆಗೆ ಸ್ವಚ್ಛ ದಾವಣಗೆರೆ ನಿರ್ಮಾಣಕ್ಕೆ ಕೈಜೋಡಿಸಬೇಕು.

ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ
ವಿದ್ಯಾಭ್ಯಾಸ ವೇಳೆ ಕಲಿಕೆ ತುಡಿತ, ಉತ್ಸಾಹ ಸ್ವಾಭಿಮಾನದ ಬದುಕಿಗೆ ಸಹಕಾರಿ: ಡಾ. ಕೃಷ್ಣೇಗೌಡ