ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಪೂರ್ವ ರಕ್ತದಾನ ಶಿಬಿರ

KannadaprabhaNewsNetwork |  
Published : Jun 14, 2026, 01:15 AM IST
19 | Kannada Prabha

ಸಾರಾಂಶ

ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನೆರವಾಗುವುದು ಈ ರಕ್ತದಾನ ಅಭಿಯಾನದ ಪ್ರಮುಖ ಉದ್ದೇಶ

ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರೀಯ ಕ್ಯಾನ್ಸರ್ ವಿಜೇತರ ದಿನದ ಅಂಗವಾಗಿ ಹಾಗೂ ಸ್ವಯಂಪ್ರೇರಿತ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಇಲ್ಲಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಸ್ಥೆ ವತಿಯಿಂದ ನಗರದಲ್ಲಿ ಅರ್ಥಪೂರ್ಣ ರಕ್ತದಾನ ಶಿಬಿರ ಆಯೋಜಿಸಿತ್ತು. ಕ್ಯಾನ್ಸರ್ ರೋಗವನ್ನು ಧೈರ್ಯದಿಂದ ಗೆದ್ದು ಬಂದ ಸಾಧಕರನ್ನು ಗೌರವಿಸುವುದು ಮತ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನೆರವಾಗುವುದು ಈ ರಕ್ತದಾನ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.ಶಿಬಿರದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಇಲ್ಲಿ ಸಂಗ್ರಹವಾದ ರಕ್ತವನ್ನು ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ತುರ್ತು ಅಗತ್ಯಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಆಸ್ಪತ್ರೆಯ ಮುಖ್ಯ ವೈದ್ಯಕೀಯ ಆನ್ಕೊಲಾಜಿಸ್ಟ್ ಡಾ.ಸಿ.ಬಿ. ಅವಿನಾಶ್, ಕ್ಯಾನ್ಸರ್ ವಿಜೇತರ ದಿನವು ಧೈರ್ಯ ಮತ್ತು ಭರವಸೆಯ ಸಂಕೇತವಾಗಿದೆ. ವೈದ್ಯಕೀಯ ಕ್ಷೇತ್ರದ ಆಧುನಿಕ ತಂತ್ರಜ್ಞಾನಗಳಿಂದಾಗಿ ಇಂದು ಸಾವಿರಾರು ರೋಗಿಗಳು ಕ್ಯಾನ್ಸರ್ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಚಿಕಿತ್ಸೆಯ ಅವಧಿಯಲ್ಲಿ ರೋಗಿಗಳಿಗೆ ಸಕಾಲದಲ್ಲಿ ರಕ್ತ ಲಭ್ಯವಾಗುವುದು ಅತ್ಯಗತ್ಯವಾಗಿದ್ದು, ಇದು ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರೋಗ್ಯವಂತ ನಾಗರಿಕರು ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.ಖುದ್ದಾಗಿ ರಕ್ತದಾನ ಮಾಡುವ ಮೂಲಕ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌತಮ್ ಧಾಮರ್ಲ ಮಾತನಾಡಿ, ಕ್ಯಾನ್ಸರ್ ವಿಜೇತರ ದೃಢಸಂಕಲ್ಪವನ್ನು ಶ್ಲಾಘಿಸಲು ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ದಾನ ಮಾಡುವ ಒಂದು ಯೂನಿಟ್ ರಕ್ತವು ಮೂರ್ನಾಲ್ಕು ಜೀವಗಳನ್ನು ಉಳಿಸುವ ಸಾಮರ್ಥ್ಯ ಹೊಂದಿದೆ ಎಂದರು.ಹಲವು ಕ್ಯಾನ್ಸರ್ ವಿಜೇತರು ಚಿಕಿತ್ಸೆಯ ಅವಧಿಯ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡು, ತಮಗೆ ಮರುಜೀವ ನೀಡಿದ ವೈದ್ಯರು, ಕುಟುಂಬಸ್ಥರು ಮತ್ತು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಯಶೋಗಾಥೆಗಳು ನೆರೆದಿದ್ದವರಲ್ಲಿ ಹೊಸ ಭರವಸೆ ಮೂಡಿಸಿದವು. ಕ್ಯಾನ್ಸರ್ ಮುನ್ನೆಚ್ಚರಿಕೆ, ಆರಂಭಿಕ ಪತ್ತೆ ಹಚ್ಚುವಿಕೆ ಹಾಗೂ ನಿಯಮಿತ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಮುಖ್ಯ ಸಲಹಾ ರೋಗಶಾಸ್ತ್ರಜ್ಞೆ ಡಾ.ಬಿ. ಕವಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂಪ್ಲಾಂಟ್ ಗರ್ಭ ತಡೆ ಸುಲಭ ವಿಧಾನ
ಪ್ರಧಾನ ಮಂತ್ರಿ ಯೋಜನೆಗಳ ಜಾರಿಯಲ್ಲಿ ಚಿತ್ರದುರ್ಗ ಕಡೇ ಸ್ಥಾನ