ಉನ್ನತ ಶಿಕ್ಷಣದಲ್ಲಿ ಡಿಜಿಟಲ್‌ ಕ್ರಾಂತಿ ಕುರಿತು ನಾಳೆ ರಾಷ್ಟ್ರೀಯ ಸಮ್ಮೇಳನ

KannadaprabhaNewsNetwork | Published : May 13, 2025 1:19 AM
Follow Us

ಸಾರಾಂಶ

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರ ಡಿಜಿಟಲ್‌ ವೇದಿಕೆಗಳಿಂದಾಗಿ ಪುನಃ ರಚಿಸಲ್ಪಟ್ಟಿದೆ. ಉನ್ನತ ಶಿಕ್ಷಣವನ್ನು ಪುನರ್‌ ವ್ಯಾಖ್ಯಾನಿಸಲಾಗುತ್ತಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಆಧುನಿಕ ತಂತ್ರಜ್ಞಾನವು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ನಡೆಸುತ್ತಿದ್ದು, ಈ ಎಲ್ಲ ವಿಷಯಗಳ ಬಗ್ಗೆ ರವಿ ಹೆಗಡೆ ಅವರು ಬೆಳಕು ಚೆಲ್ಲಲಿದ್ದಾರೆ.

ಧಾರವಾಡ: ಇಲ್ಲಿಯ ರಾಯಾಪುರದ ಎಸ್‌ಜೆಎಂವಿ ಮಹಾಂತ ಕಾಲೇಜು ಮೇ 14ರಂದು ಉನ್ನತ ಶಿಕ್ಷಣದಲ್ಲಿ ಡಿಜಿಟಲ್‌ ಕ್ರಾಂತಿ- ವಿಕಸಿತ ಬೋಧನೆ ಮತ್ತು ಕಲಿಕೆಯಲ್ಲಿ ಬದಲಾದ ಬೋಧನಾ ಪದ್ಧತಿ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ್ದು, ಪ್ರಮುಖ ಭಾಷಣಕಾರರಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸುತ್ತಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜಿನ ಪ್ರಾಚಾರ್ಯ ಡಾ. ರಾಜಶೇಖರಪ್ಪ ಎಂ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರ ಡಿಜಿಟಲ್‌ ವೇದಿಕೆಗಳಿಂದಾಗಿ ಪುನಃ ರಚಿಸಲ್ಪಟ್ಟಿದೆ. ಉನ್ನತ ಶಿಕ್ಷಣವನ್ನು ಪುನರ್‌ ವ್ಯಾಖ್ಯಾನಿಸಲಾಗುತ್ತಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಆಧುನಿಕ ತಂತ್ರಜ್ಞಾನವು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ನಡೆಸುತ್ತಿದ್ದು, ಈ ಎಲ್ಲ ವಿಷಯಗಳ ಬಗ್ಗೆ ರವಿ ಹೆಗಡೆ ಅವರು ಬೆಳಕು ಚೆಲ್ಲಲಿದ್ದಾರೆ.

ಕಾಲೇಜಿನ ಸಭಾಭವನದಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಸಮ್ಮೇಳನ ಶುರುವಾಗಲಿದ್ದು, ಚಿತ್ರದುರ್ಗದ ಎಸ್‌ಜೆಎಂವಿ ವಿದ್ಯಾಪೀಠದ ಮುರುಘ ರಾಜೇಂದ್ರ ಮಠದ ಅಧ್ಯಕ್ಷ ಶಿವಯೋಗಿ ಕಳಸದ ಹಾಗೂ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದರು.

ಕರ್ನಾಟಕ ವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್. ಅತಿಥಿಗಳಾಗಿ ಭಾಗವಹಿಸುತ್ತಿದ್ದು, ಕಾರ್ಯಕ್ರಮ ಸಂಘಟಕರಾದ ಡಾ. ಪುಷ್ಪಾ ಬಸನಗೌಡರ, ಪ್ರೊ. ಜೆ.ಪಿ. ಎಂಡಿಗೇರಿ, ಪ್ರೊ. ಸಿ.ಕೆ. ಹುಬ್ಬಳ್ಳಿ ಹಾಗೂ ಬಸವರಾಜ ಆನೆಗುಂದಿ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ತಾಂತ್ರಿಕ ಸಮ್ಮೇಳನಗಳು ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸುವರು. ನಂತರ ಡಿಜಿಟಲ್‌ ಯುಗದಲ್ಲಿ ಕೃತಕ ಬುದ್ಧಿಮತ್ತೆ ಪಾತ್ರ, ಭಾಷೆ, ಸಾಹಿತ್ಯ, ಸಮಾಜ ವಿಜ್ಞಾನಗಳ ಮೇಲೆ ಆಧುನಿಕ ತಂತ್ರಜ್ಞಾನ ಪ್ರಭಾವ, ಭವಿಷ್ಯದ ತಲೆಮಾರಿಗೆ ಡಿಜಿಟಲ್‌ ತಂತ್ರಜ್ಞಾನ, ಸಾಂಸ್ಕೃತಿಕ ಪರಿಗಣನೆಗಳು ಅಂತಹ ವಿಷಯಗಳ ಕುರಿತು 30ಕ್ಕೂ ಹೆಚ್ಚು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪ್ರಬಂಧ ಮಂಡಿಸುವರು ಎಂದರು.

ಸಂಜೆ 4.30ಕ್ಕೆ ಮಹಾರಾಷ್ಟ್ರದ ನಿವೃತ್ತ ಪ್ರಾಚಾರ್ಯೆ ಚೈತ್ರಾ ನಾಯಕ ಸಮಾರೋಪ ಭಾಷಣ ಮಾಡುವರು. ವಿದ್ಯಾಪೀಠದ ಸದಸ್ಯ ಎಸ್.ಎಸ್. ಚಂದ್ರಶೇಖರ, ಪಿ.ಎಸ್. ಶಂಕರ ಪಾಲ್ಗೊಳ್ಳುವರು ಎಂದು ಡಾ. ರಾಜಶೇಖರಪ್ಪ ಮಾಹಿತಿ ನೀಡಿದರು.