ಗದಗ: ಗ್ರಾಮಗಳ ಅಭಿವೃದ್ಧಿ ಆಗದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ದೇಶವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗ್ರಾಮ ದೇವಿಯ ಸಮುದಾಯ ಭವನ ನಿರ್ಮಾಣ ಮಾಡುವುದು ಒಂದು ನಿಮಿತ್ತ ಮಾತ್ರ, ಆದರೆ, ಎಲ್ಲರೂ ಒಟ್ಟಾಗಿ ಸೇರಿ ಮಾಡುತ್ತಿರುವುದು ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದರು.
ಅಭಿವೃದ್ಧಿಯ ಸುತ್ತ ಜನ ಓಡಾಡಬಾರದು, ಜನರ ಸುತ್ತ ಅಭಿವೃದ್ಧಿ ಆಗಬೇಕು. ಎಲ್ಲಿ ಜನ ವಾಸವಾಗಿದ್ದಾರೊ ಅಲ್ಲಿ ಅಭಿವೃದ್ಧಿ ಆಗಬೇಕು. ಡಿಸಿ ಕಚೇರಿ ಸುತ್ತ ಅಭಿವೃದ್ಧಿ ಆಗುವುದಲ್ಲ. ಭಾರತ ಗ್ರಾಮಗಳಿಂದ ಕೂಡಿದ ದೇಶ, ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯ, ರಾಮರಾಜ್ಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ಎಲ್ಲೋ ಒಂದು ಕಡೆ ನಾವು ಮರೆತಂತೆ ಕಾಣಿಸುತ್ತದೆ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ದೇಶವನ್ನು ಸ್ವಾವಲಂಬನೆಯ ಸ್ವಾಭಿಮಾನಿ ದೇಶ ಮಾಡಿರುವುದು ರೈತ. ಕೃಷಿ ಅಭಿವೃದ್ಧಿ ಆಗಿದೆ. ಆದರೆ, ರೈತ ಅಭಿವೃದ್ಧಿ ಆಗಿಲ್ಲ. ಎಲ್ಲರಿಗೂ ಆಹಾರದ ಭದ್ರತೆ ಇದೆ. ಆದರೆ, ಆಹಾರ ಬೆಳೆದಿರುವ ರೈತನ ಪರಿಸ್ಥಿತಿ ಸೋಚನೀಯವಾಗಿದೆ. ರೈತರಮನೆಯಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ, ಮದುವೆ ಮಾಡಿದರೆ ಸಾಲ ಹೆಚ್ಚಾಗುತ್ತದೆ. ಅದಕ್ಕೆ ನಾನು ಬ್ಯಾಂಕರ್ಸ್ ಮೀಟಿಂಗ್‌ನಲ್ಲಿ ಹೇಳಿದ್ದೇನೆ. ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗುವುದು ಕೃಷಿ ವಲಯದಲ್ಲಿ, ಕೃಷಿ ಆದಾಯ ಹೆಚ್ಚಾಗಿ ರೈತನ ಆರ್ಥಿಕ ಸ್ಥಿತಿ ಸುಧಾರಣೆ ಆದಾಗ ಅವನ ಕೈಯಲ್ಲಿ ದುಡ್ಡಿದ್ದರೆ ಹೆಚ್ಚು ಖರ್ಚು ಮಾಡುತ್ತಾನೆ. ಸರ್ಕಾರಕ್ಕೆ ಅದಾಯ ಹೆಚ್ಚಾಗುತ್ತದೆ ಎಂದರು.ಗ್ರಾಮೀಣ ಪ್ರದೇಶದ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ರೈತರಿಗೆ ನೀಡುವ ಬೀಜ, ಗೊಬ್ಬರದ ಬೆಲೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಡಿಸೇಲ್, ಪೆಟ್ರೊಲ್ ಬಳಕೆ ಮಾಡುವ ರೈತರ ಖರ್ಚು ಹೆಚ್ಚಾಗಿದೆ. ಗಾಡಿಗೆ ಹಾಕುವ ಎಣ್ಣೆ ಹಾಗೂ ಸಂಜೆ ಹಾಕುವ ಎಣ್ಣೆಯ ದರವೂ ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಜನತೆ ಸಾಲದ ಸೂಲದಲ್ಲಿ ಸಿಲುಕುವಂತೆ ಆಗಿದೆ. ಇದು ಬದಲಾವಣೆ ಆಗಬೇಕು. ಅಂದಾಗ ಮಾತ್ರ ಈ ದೇಶಕ್ಕೆ ನಾಡಿಗೆ ಭವಿಷ್ಯ ಇದೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಸಿಕ್ಕಾಗ ಮಾತ್ರ ಮಾಡಲು ಸಾಧ್ಯ.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಎಸ್. ಪಾಟೀಲ್, ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಗ್ರಾಮೀಣ ಮಂಡಳದ ಅಧ್ಯಕ್ಷ ಬೂದಪ್ಪ ಹಳ್ಳಿ, ಬಿ.ಎಸ್. ಚಿಂಚಲಿ, ಶಾಂತಣ್ಣ ಕಲಕೇರಿ, ಕೃಷ್ಣಾ ರಾಠೋಡ, ಅಲ್ಲಾಸಾಬ ಪೀರಕಣ್ಣವರ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮದ ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನಾಶೀರ್ವಾದವನ್ನು ಪಡೆಯಲಾಯಿತು.