ಕನ್ನಡಪ್ರಭ ವಾರ್ತೆ ಹುಣಸೂರು ಮಕ್ಕಳಲ್ಲಿ ಸಂಸ್ಕೃತಿ, ಸಭ್ಯತೆ ಮತ್ತು ಸನ್ನಡತೆ ರೂಪಿಸಲು ವಚನಗಳನ್ನು ಓದುವ ಹವ್ಯಾಸಗಳನ್ನು ಬೆಳಸುವ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ರುದ್ರಪ್ಪ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ವೀರಶೈವ ಮಹಾಸಭಾ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಅನುಭವ ಮಂಟಪದ ಮೂಲಕ ಕೊಟ್ಟ ಮಹನೀಯ ಬಸವಣ್ಣ. ರಾಜನ ಆಡಳಿತ ಜನಸಾಮಾನ್ಯರಿಗಾಗಿಯೇ ಇರಬೇಕೆಂದು ವಾದಿಸಿ ಬಿಜ್ಜಳನ ಆಸ್ಥಾನದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದ ಪ್ರಜಾಪ್ರಭುತ್ವವಾದಿ ಬಸವಣ್ಣ. ದೇಶಕ್ಕೆ ಮತ್ತು ವಿಶ್ವಕ್ಕೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಕೊಡುಗೆ ಎಂದಿಗೂ ಮರೆಯುವಂತಹುದಲ್ಲ. ವಿಪರ್ಯಾಸವೆಂದರೆ ನಾವ್ಯಾರೂ ಈ ಮಹನೀಯರ ಜೀವಿತಾವಧಿಯಲ್ಲಿ ಅವರನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಅವರ ಕಾಲವಾದ ನಂತರವೂ ಇಂದಿಗೂ ಅವರ ನೀತಿ, ಆದರ್ಶಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ವಿಫಲರಾಗಿದ್ದೇವೆಂದು ವಿಷಾಧಿಸಿದರು. ವಚನಗಳ ಮಕ್ಕಳ ಕೈಗೆ ಸಿಗಲಿಇಂದಿನ ಯುವ ಸಮೂಹ ವಿದ್ಯಾವಂತರು, ಬುದ್ಧಿವಂತರಿದ್ದಾರೆ. ಆದರೆ ಈ ನೆಲದ ಸಂಸ್ಕೃತಿ, ಪರಂಪರೆ, ಸನ್ನಡತೆ ಅವರಲ್ಲಿ ಮಾಯವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ವಚನ ಸಾಹಿತ್ಯದ ಅಧ್ಯಯನಕ್ಕೆ ಪ್ರೇರೇಪಣೆ ನೀಡುವ ಮೂಲಕ ಬದುಕು ಸುಂದರವಾಗಿಸುವ ಮತ್ತು ಆ ಮೂಲಕ ಸದೃಢ ಸಮಾಜ ಸೃಷ್ಟಿಗೆ ಶ್ರಮಿಸಬೇಕಿದೆ ಎಂದರು.ತಾಲೂಕು ವೀರಶೈವಮಹಾಸಭಾ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಮೇ 12ರಂದು ತಾಲೂಕಿನಲ್ಲಿ ಬಸವಜಯಂತಿ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ತಾಲೂಕಿನ ಎಲ್ಲ ಸಮುದಾಯಗಳ ಸಮಸ್ತ ಜನರೂ ಅಂದು ಆಯೋಜನೆಗೊಂಡಿರುವ ಧಾರ್ಮಿಕ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.ಸಭೆಯಲ್ಲಿ ಮುಖಂಡರಾದ ಸತ್ಯಪ್ಪ, ಗುರುಪುರ ಖಾಲಿದ್ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ನರಸಿಂಹಯ್ಯ ಶುಭಾಶಯಗಳನ್ನು ತಿಳಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ಗುರುಸ್ವಾಮಿ, ಧನಂಜಯ, ಕೆಂಪರಾಜು, ಶಿರಸ್ತೇದಾರ್ ಶ್ರೀಪಾದ್, ಪೌರಾಯುಕ್ತೆ ಕೆ. ಮಾನಸ ಇದ್ದರು.