ಕನ್ನಡಪ್ರಭ ವಾರ್ತೆ ಯಾದಗಿರಿ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆ ಹಿಂದುಳಿದಿದೆ. ಮುಂದಿನ ಸಾಲಿನಲ್ಲಿ ಹೆಚ್ಚಿನ ಸ್ಥಾನಕ್ಕೆ ಏರಲು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರತಿಯೊಬ್ಬ ಉಪನ್ಯಾಸಕರೂ ಶ್ರಮಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಂಡಿತ್ ಪವಾರ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ (ಯಾದಗಿರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಜಿಲ್ಲಾ ಮಟ್ಟದ ಭಾರತ ಸೇವಾದಳ ಮತ್ತು ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಫಲಿತಾಂಶ ಸುಧಾರಣೆಗೆ ಉಪನ್ಯಾಸಕರ ಪ್ರಯತ್ನ ಬದ್ಧತೆಯಿಂದ ಕೂಡಿರಬೇಕು, ಕೆಲವರು ಕರ್ತವ್ಯದಲ್ಲಿ ತೋರುವ ನಿರ್ಲಕ್ಷ್ಯವೇ ಫಲಿತಾಂಶ ಕುಸಿತಕ್ಕೆ ಕಾರಣ. ಉಪನ್ಯಾಸಕರು ಬದ್ಧತೆಯಿಂದ ಕಾರ್ಯನಿರ್ವಹಿಸಿದಲ್ಲಿ ಯಾದಗಿರಿ ಟಾಪ್ ಜಿಲ್ಲೆಗಳಿಗೆ ಸೆಡ್ಡು ಹೊಡೆಯುವ ಸಾಧನೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ನಾಗರಿಕನು ರಾಷ್ಟ್ರಧ್ವಜದ ಗೌರವ ಕಾಪಾಡಬೇಕು. ಶಿಸ್ತು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ನಿಜವಾದ ಸೇವಾದಳದ ಆದರ್ಶಗಳನ್ನು ಪಾಲಿಸಬಹುದು ಎಂದು ಹೇಳಿದರು. ಇದೇ ವೇಳೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಐಎಸ್‍ಐ ಮಾರ್ಕ್ ಹೊಂದಿರುವ ರಾಷ್ಟ್ರಧ್ವಜವನ್ನು ಬಳಸುವಂತೆ ಕರೆ ನೀಡಿದರು.ಕಾರ್ಯಕ್ರಮವನ್ನು ಭಾರತ ಸೇವಾದಳ ರಾಜ್ಯ ಉಪಾಧ್ಯಕ್ಷರಾದ ಚೆನ್ನಾರೆಡ್ಡಿಗೌಡ ಬಿಳ್ಹಾರ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಿದ್ರಾಮರೆಡ್ಡಿ ಕೌಳೂರುರವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಭಾರತ ಸೇವಾದಳದ ಯಾದಗಿರಿ ಜಿಲ್ಲಾ ಸಂಘಟಿಕರಾದ ಸೈಯದ್ ಕಮರುದ್ದೀನ್ ಅವರು ಉಪನ್ಯಾಸಕರಿಗೆ ರಾಷ್ಟ್ರಧ್ವಜ ಕಟ್ಟುವ ಪ್ರಾಯೋಗಿಕ ತರಬೇತಿ ನೀಡಿ, ಧ್ವಜದ ಬಣ್ಣಗಳ ಅರ್ಥ, ಧ್ವಜಾರೋಹಣದ ನಿಯಮಗಳು ಹಾಗೂ ಸೇವಾದಳದ ಚಟುವಟಿಕೆಗಳ ಬಗ್ಗೆ ತಿಳಿಸಿದರು.ಭಾರತ ಸೇವಾ ದಳದ ವಿಭಾಗ ಸಂಘಟಿಕರಾದ ವಿದ್ಯಾಸಾಗರ ಚಿಣಮಗೇರಿ ಪ್ರಾಸ್ತಾವಿಸಿದರು.ಜಿಲ್ಲಾ ಸಂಘಟಿಕರಾದ ಸೈಯದ್ ಕಮರುದ್ದೀನ್ ನಿರೂಪಿಸಿದರು. ಕಲಬುರಗಿ ಭಾರತ ಸೇವಾದಳದ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ ಜಮಾದರ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ವೈದ್ಯ, ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕಿಯರ ಪ್ರಾಂಶುಪಾಲರಾದ ಬಿಸಲಪ್ಪ ಕಟ್ಟಿಮನಿ, ಲಕ್ಷ್ಮಣ ರೆಡ್ಡಿ, ವಿರೂಪಾಕ್ಷಯ್ಯ ದಂಡಿಗಿಮಠ, ಸೇರಿದಂತೆ ವಿವಿಧ ಕಾಲೇಜಿನ ಉಪನ್ಯಾಸಕರು ಹಾಗೂ ಬಾಲಕಿಯರು ಸೇರಿದಂತೆ ಇನ್ನಿತರರಿದ್ದರು.