ವಿಶೇಷ ವರದಿ
ಕುಶಾಲನಗರದಿಂದ ರಾಷ್ಟ್ರೀಯ ಹೆದ್ದಾರಿ -275ರ ಮೈಸೂರು ಭಾಗಕ್ಕೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಕಳೆದ ಕೆಲವು ತಿಂಗಳುಗಳಿಂದ ಬಿರುಸಿನಿಂದ ನಡೆಯುತ್ತಿದೆ.
ಒಟ್ಟು 97.335 ಕಿ.ಮೀ. ದೂರದ ರಸ್ತೆ ಕಾಮಗಾರಿ ಕುಶಾಲನಗರ ಬೈಪಾಸ್ ನಲ್ಲಿ ಆರಂಭವಾಗಿ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯಲ್ಲಿ ಕೊನೆಗೊಳ್ಳಲಿದೆ.ಕಾಮಗಾರಿ ಯೋಜನೆಯ ಪ್ಯಾಕೇಜ್- 2ರ ಜಿಲ್ಲೆಯ ವ್ಯಾಪ್ತಿಯ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಕಳೆದ ಮೂರು ವಾರಗಳಿಂದ ಆರಂಭಗೊಂಡಿದ್ದು, 2027ರ ಆರಂಭದಲ್ಲಿ ರಸ್ತೆ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.ತೆಪ್ಪದ ಕಂಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಸಮೀಪದಲ್ಲಿ ಬೃಹತ್ ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಯಲಿದೆ. ಗುಡ್ಡೆ ಹೊಸೂರು ಸಿದ್ದಾಪುರ ರಾಜ್ಯ ಹೆದ್ದಾರಿ ಕೆಳಭಾಗದಲ್ಲಿ ಸಾಗಲಿದ್ದು, ಮೇಲ್ಭಾಗದಲ್ಲಿ ಮೈಸೂರು-ಕುಶಾಲನಗರ (ಬಸವನಹಳ್ಳಿ) ಫ್ಲೈ ಓವರ್ ಚತುಷ್ಪಥ ರಸ್ತೆ ಸಾಗಲಿದೆ.
ಬಸವನಹಳ್ಳಿ ಗ್ರಾಮದ 50 ಕುಟುಂಬಗಳು 25 ಕಟ್ಟಡಗಳು ಸೇರಿದಂತೆ ಆಸ್ತಿ ಮನೆಯನ್ನು ಕಳೆದುಕೊಂಡಿದ್ದು, ಈಗಾಗಲೇ ಸರ್ಕಾರದಿಂದ ಅಗತ್ಯ ಪರಿಹಾರ ಪಡೆದುಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಮತ್ತು ಈ ವ್ಯಾಪ್ತಿಯಲ್ಲಿ ವನ್ಯಜೀವಿ ಅರಣ್ಯ ವಿಭಾಗದ ತಕರಾರು ವ್ಯಾಜ್ಯ ತೆರವು ಗೊಂಡಿದ್ದು, ಇದೀಗ ಕಾಮಗಾರಿ ಆರಂಭಗೊಂಡಿರುವುದು ಕಂಡುಬಂದಿದೆ. ಶ್ರೀರಂಗಪಟ್ಟಣ-ಕುಶಾಲನಗರ (ಬಸವನಹಳ್ಳಿ) ತನಕ ಪ್ರಸ್ತಾವಿತ 45 ನಗರ, 60 ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ರಸ್ತೆ ಸುಮಾರು 2502.04 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಕೊಡಗು ಮೈಸೂರು ಮಂಡ್ಯ ಜಿಲ್ಲೆಗಳ ಭೂ ಪ್ರದೇಶಗಳನ್ನೊಳಗೊಂಡ ಈ ಯೋಜನೆ ಬಯಲು ಪ್ರದೇಶ ಮತ್ತು ಗುಡ್ಡಗಾಡು ವ್ಯಾಪ್ತಿಯಲ್ಲಿ ನಡೆಯಲಿದೆ. ಸುಮಾರು 581 ಹೆಕ್ಟೇರ್ ಭೂಮಿಯನ್ನು ಬಳಸಿಕೊಂಡು ಈ ರಸ್ತೆ ನಿರ್ಮಾಣವಾಗುತ್ತಿದ್ದು, ಸುಮಾರು 46.85 ಹೆಕ್ಟೇರ್ ಅರಣ್ಯ ಪ್ರದೇಶಗಳನ್ನು ರಸ್ತೆ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ. ಅರಣ್ಯ ಇಲಾಖೆಯಿಂದ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಯೋಜನೆಗೆ ಈಗ ಎಲ್ಲೆಡೆ ಗ್ರೀನ್ ಸಿಗ್ನಲ್ ಲಭಿಸಿದೆ.
ಇಡೀ ಯೋಜನಾ ವ್ಯಾಪ್ತಿಯಲ್ಲಿ 326 ಕುಟುಂಬಗಳು ಹೆದ್ದಾರಿ ಕಾಮಗಾರಿ ಪ್ರಭಾವಕ್ಕೊಳಪಟ್ಟಿದ್ದು ಕೊಡಗು ಜಿಲ್ಲೆಯ ವ್ಯಾಪ್ತಿಯ ಒಟ್ಟು 50 ಮನೆಗಳು ಇದರಲ್ಲಿ ಒಳಗೊಂಡಿವೆ. 380 ಕಟ್ಟಡ, ಆಸ್ತಿಪಾಸ್ತಿಗೆ ಹಾನಿಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಅದರಲ್ಲಿ ಕೊಡಗು ಜಿಲ್ಲೆಯ ಬಸವನಹಳ್ಳಿ ಗ್ರಾಮದ 25 ಕಟ್ಟಡಗಳು ಸೇರಿಕೊಂಡಿವೆ. ಮನೆ ಆಸ್ತಿ ಆಸ್ತಿ ಕಳೆದುಕೊಳ್ಳುವ ಎಲ್ಲ ಮಾಲೀಕರಿಗೂ ದುಪ್ಪಟ್ಟು ಪ್ರಮಾಣದ ನಗದು ಪರಿಹಾರ ಈಗಾಗಲೇ ಕಲ್ಪಿಸಲಾಗಿದೆ ಎಂದು ಹೆದ್ದಾರಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಒಟ್ಟಾರೆ ಎರಡು ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದ್ದು, ಹುಣಸೂರು ಪಿರಿಯಾಪಟ್ಟಣ ಹೆದ್ದಾರಿ ನಡುವೆ ನಿರ್ಮಾಣದ ಹಂತದಲ್ಲಿದೆ. ಅಗತ್ಯ ಇರುವ ಸ್ಥಳಗಳಲ್ಲಿ 44 ಚಿಕ್ಕ ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ. ಕಾಮಗಾರಿಯಲ್ಲಿ ಒಟ್ಟು 22 ವಾಹನ ಸುರಂಗ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ಎರಡು ವಾಹನ ಸುರಂಗಗಳು ನಿರ್ಮಾಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ 21 ಲಘು ವಾಹನ ಸುರಂಗ ಕಾಮಗಾರಿ ನಡೆಯಲಿದೆ. ಒಟ್ಟು ಯೋಜನಾ ವೆಚ್ಚ 4128.92 ಕೋಟಿ ರೂಗಳಾಗಿದ್ದು ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ 92 ಕೋಟಿ ರು. ವೆಚ್ಚವಾಗಲಿದೆ.ಹೆದ್ದಾರಿ ಕಾಮಗಾರಿ ಸಂದರ್ಭ ಅಂದಾಜು 18 ಸಾವಿರ ಸಂಖ್ಯೆಯ ಮರಗಳನ್ನು ಕಡಿಯುವ ನಿರೀಕ್ಷೆ ಹೊಂದಲಾಗಿದ್ದು ಈಗಾಗಲೇ ಬಹುತೇಕ ಮರಗಳನ್ನು ತೆರವುಗೊಳಿಸಲಾಗಿದೆ. ಯೋಜನೆಯಿಂದ ತೊಂದರೆಗೆ ಒಳಗಾಗುವ ಸಾಂಸ್ಕೃತಿಕ ಧಾರ್ಮಿಕ ಸಮುದಾಯದ ಆಸ್ತಿಗಳು ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಆಸ್ಪತ್ರೆಗಳನ್ನು ಕೂಡ ಗುರುತಿಸಲಾಗಿದ್ದು ಅವುಗಳನ್ನು ತೆರವುಗೊಳಿಸಿ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.