- ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ, ಸೇವೆ ಬಗ್ಗೆ ಜಾಗೃತಿ: ನ್ಯಾ.ಮಂಜುನಾಥ ಬಣಕಾರ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987 ಜಾರಿಗೆ ಬಂದಿದ್ದು, ಇದರ ಸವಿನೆನಪಿಗಾಗಿ ಪ್ರತಿ ವರ್ಷ ನ.9ರಂದು ಕಾನೂನು ಸೇವೆಗಳ ದಿನವನ್ನಾಗಿ ದೇಶಾದ್ಯಾಂತ ಆಚರಿಸಲಾಗುತ್ತಿದೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದರು.ತಾಲೂಕಿನಲ್ಲಿ ನ್ಯಾಯಾಂಗ ಇಲಾಖೆ ಸೇರಿದಂತೆ ಶಿಕ್ಷಣ, ಮಕ್ಕಳ ಮತ್ತು ಮಹಿಳಾ ಇಲಾಖೆ,ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ದಿ ಹಾಗೂ ಕಂದಾಯ ಇಲಾಖೆಗಳ ಸಹಯೋಗದಲ್ಲಿ ತಾಲೂಕಿನಾದ್ಯಂತ ಅತಿ ಹಿಂದುಳಿದ ಪ್ರದೇಶಗಳು, ಹಾಗೂ ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಗ್ಗೆ ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗಿದ್ದು, ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ, ಕಾರ್ಯಗಳು, ಮತ್ತು ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕಾಗಿದೆ. ಶಾಲೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಮಾಹಿತಿ ಹಾಗೂ ಕಾನೂನು ನೆರವಿನ ಬಗ್ಗೆ ಜಾಗೃತಿ ಸಾಮಗ್ರಿಗಳನ್ನು ವಿತರಿಸುವುದು. ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಥೀಮ್ ಹಾಡನ್ನು ಕಡ್ಡಾಯವಾಗಿ ಪ್ಲೇ ಮಾಡಬೇಕು ಎಂದು ತಿಳಿಸಿದರು.
ಕಾನೂನು ಸಾಕ್ಷರತೆ, ಮತ್ತು ಜಾಗೃತಿ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶಗಳು ಹಾಗೂ ಶಾಲಾ ಕಾಲೇಜುಗಳ ಹಂತಗಳಲ್ಲಿ ಒಂದು ವಾರಗಳ ಕಾಲ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಗ್ರ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
- - -
ನ್ಯಾಯಾಧೀಶ ಮಂಜುನಾಥ ಬಣಕಾರ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.