ಬ್ಯಾಡಗಿ: ಮೆಣಸಿನಕಾಯಿ ಮಾರುಕಟ್ಟೆ ಮೂಲಕ ವಿಶ್ವದ ಗಮನ ಸೆಳೆದಿರುವ ಬ್ಯಾಡಗಿ, ಕೆಲವೇ ದಿನಗಳಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಆಯೋಜಿಸುವ ಮೂಲಕ ದೇಶದ ಗಮನ ಸೆಳೆಯಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರದಿಂದ ದೇಶ-ವಿದೇಶಗಳಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ, ಇದೇ ರೀತಿಯಲ್ಲಿ ಇಲ್ಲಿನ ಯುವ ಕ್ರೀಡಾಪಟುಗಳ ಪ್ರತಿಭೆಗೂ ಸೂಕ್ತ ವೇದಿಕೆ ದೊರೆತರೆ ಕ್ರೀಡಾಕ್ಷೇತ್ರದಲ್ಲಿಯೂ ಬ್ಯಾಡಗಿ ತನ್ನದೇ ಛಾಪು ಮೂಡಿಸಲಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ಸೂಕ್ತ ಅವಕಾಶ ಹಾಗೂ ತರಬೇತಿಯ ಕೊರತೆಯಿಂದ ಪ್ರತಿಭೆಗಳು ಅನಾವರಣಗೊಳ್ಳುತ್ತಿಲ್ಲ, ವಿಜುವೆಲರ್ಸ್ ನಡೆಸುತ್ತಿರುವ ಇಂತಹ ಕ್ರೀಡಾಕೂಟಗಳು ಪ್ರತಿಭಾವಂತ ಮಕ್ಕಳನ್ನು ಗುರ್ತಿಸಲು ಉತ್ತಮ ವೇದಿಕೆಯಾಗಿವೆ ಎಂದರು.
ನಿರಂತರ ತರಬೇತಿ ಅಗತ್ಯ: ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ಕಬಡ್ಡಿ ಒಂದು ದಿನದ ತರಬೇತಿ ಪಡೆದು ಆಡುವ ಆಟವಲ್ಲ. ನಿರಂತರ ಅಭ್ಯಾಸ, ದೈಹಿಕ ಸದೃಢತೆ, ಶಿಸ್ತು ಹಾಗೂ ಮಾನಸಿಕ ಸ್ಥೈರ್ಯದಿಂದ ಮಾತ್ರ ಕಬಡ್ಡಿಯಲ್ಲಿ ಸಾಧನೆ ಮಾಡಲು ಸಾಧ್ಯ, ಇಂದಿನ ಯುವಜನತೆ ಗುಟಕಾ ಸೇರಿದಂತೆ ವಿವಿಧ ದುಶ್ಚಟಗಳಿಗೆ ಹಾಗೂ ಮೊಬೈಲ್ ಬಳಕೆಯ ಅತಿಯಾದ ವ್ಯಸನಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಇಂತಹ ಪರಿಸ್ಥಿತಿಯಲ್ಲಿ ಕಬಡ್ಡಿಯಂತಹ ಅಪ್ಪಟ ದೇಶಿ ಕ್ರೀಡೆಗಳು ಯುವಜನರನ್ನು ಆರೋಗ್ಯಕರ ಜೀವನಶೈಲಿಯತ್ತ ಕೊಂಡೊಯ್ಯಬಲ್ಲವು ಎಂದರು.ಗ್ರಾಮೀಣ ಪ್ರತಿಭೆಗಳಿಗೆ ದೊಡ್ಡ ವೇದಿಕೆ: ಹಾವೇರಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಾಗದೆ ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ದೈಹಿಕ ಸದೃಢತೆಯನ್ನು ಬೆಳೆಸುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೆ ದೊಡ್ಡಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಬಡ್ಡಿ ಅಸೋಸಿಯೇಶನ್ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು. ಕಬಡ್ಡಿ ಕ್ರೀಡೆಯನ್ನು ಗ್ರಾಮೀಣ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕೆ ಮುನ್ನಡಿ ಇಡುತ್ತಿದೆ ಎಂದರು.
ಬರುವ ಡಿಸೆಂಬರ್ 16ರಿಂದ 20ರ ವರೆಗೆ ಸುಮಾರು 1 ಕೋಟಿ ವೆಚ್ಚದಲ್ಲಿ 19 ವರ್ಷ ಒಳಗಿನ ಬಾಲಕಿಯರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಬ್ಯಾಡಗಿಯಲ್ಲಿ ಆಯೋಜಿಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ತಂಡಗಳು ಆಗಮಿಸಲಿವೆ. ಕ್ರೀಡಾಕೂಟದ ಮೂಲಕ ಬ್ಯಾಡಗಿ ಮತ್ತಷ್ಟು ಕ್ರೀಡಾ ಕ್ಷೇತ್ರದಲ್ಲಿ ಬೆಳಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.