ಗಣೇಶ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆದ್ಯತೆ: ಸಿಪಿಐ ನ್ಯಾಮಗೌಡ

KannadaprabhaNewsNetwork |  
Published : Sep 07, 2026, 02:45 AM IST
ಪೊಟೋ- ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಿಪಿಐ ಬಿ.ವಿ.ನ್ಯಾಮಗೌಡ ಮಾತನಾಡಿದರು. ಪಿಎಸ್‌ಐ ಆನಂದ ಕ್ಯಾರಿಕಟ್ಟಿ ಇದ್ದರು. | Kannada Prabha

ಸಾರಾಂಶ

ಗಣೇಶ ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸುವಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಈ ವರ್ಷವು ಸಹ ಸಂಭ್ರಮ, ಶಾಂತಿಯಿಂದ ಹಬ್ಬ ಆಚರಿಸಬೇಕು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಗಣೇಶ ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸುವಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಈ ವರ್ಷವು ಸಹ ಸಂಭ್ರಮ, ಶಾಂತಿಯಿಂದ ಹಬ್ಬ ಆಚರಿಸಬೇಕು. ಹಬ್ಬದ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಬಿ.ವಿ. ನ್ಯಾಮಗೌಡ ಹೇಳಿದರು.

ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಡಾಲ್ಟಿ ಡಿಜೆಗಳಂತಹ ಅತಿಯಾದ ಶಬ್ದ ಉಂಟುಮಾಡುವ ಧ್ವನಿವರ್ಧಕ ನಿಷೇಧಿಸಿದ್ದು, ಕಡಿಮೆ ಶಬ್ದವನ್ನುಂಟು ಮಾಡುವ ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಪೊಲೀಸರು ಕೊಡುವ ಸಲಹೆ ಸೂಚನೆಗಳನ್ನು ಗಣೇಶ ಮಂಡಳಿಯವರು ಪಾಲಿಸಬೇಕು. ಅದೇ ರೀತಿ ಸಾರ್ವಜನಿಕರ ಹಿತದೃಷ್ಟಿಯಿಂದ ಗಣೇಶ ಪ್ರತಿಷ್ಠಾಪನೆಗೆ ಪುರಸಭೆ, ಹೆಸ್ಕಾಂ, ಅಗ್ನಿಶಾಮಕ, ಪೊಲೀಸ್ ಇಲಾಖೆ ಅನುಮತಿ ಪಡೆಯಲು ಒಂದೇ ಕಡೆ ಅರ್ಜಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೩೦೦ಕ್ಕಿಂತಲೂ ಹೆಚ್ಚು ಸಾರ್ವಜನಿಕ ಗಣೇಶ ಸ್ಥಾಪನೆ ಆಗಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಪಿಒಪಿ ಗಣೇಶ ಮೂರ್ತಿಯನ್ನು ನಿಷೇಧಿಸಲಾಗಿದೆ. ಗಣೇಶ ಮಂಡಳಿಯವರು ಕಡ್ಡಾಯವಾಗಿ ಮಣ್ಣಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಕೂಡಿಸುವುದಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.

ಪುರಸಭೆ ಅಧಿಕಾರಿಗಳ ಜೊತೆಗೆ ಮಾತನಾಡಿ ಕೆಲವು ಕಡೆ ಗಣೇಶ ವಿಸರ್ಜನೆಗೆ ಹೊಂಡಗಳನ್ನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ. ಡಿಜೆದಿಂದ ಅರೋಗ್ಯ ಹಾನಿಕಾರಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಿ, ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿನ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಶಾಂತಿ ಕದಡುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು.

ಪಿಎಸ್‌ಐ ಆನಂದ ಕ್ಯಾರಿಕಟ್ಟಿ ಮಾತನಾಡಿದರು. ಸಾರ್ವಜನಿಕರ ಪರವಾಗಿ ಗಂಗಾಧರ ಮೆಣಸಿನಕಾಯಿ, ಪೂರ್ಣಾಜಿ ಕರಾಟೆ, ಶರಣು ಗೋಡಿ, ಸೋಮಣ್ಣ ಬೆಟಗೇರಿ, ಈರಣ್ಣ ಪೂಜಾರ, ಫಕ್ಕೀರೇಶ ಅಣ್ಣಿಗೇರಿ ಮಾತನಾಡಿದರು. ಈ ವೇಳೆ ಅಂಜುಮನ ಕಮಿಟಿ ನೂತನ ಅಧ್ಯಕ್ಷ ಜಮೀಲಅಹ್ಮದ ಸೂರಣಗಿ, ಡಿ.ಬಿ. ಫಕ್ಕೀರಪ್ಪ, ಅಮರೀಶ ತೆಂಬದಮನಿ, ಮಂಜುನಾಥ ಕೊಡಳ್ಳಿ, ಸಂತೋಷ ನಂದೆಣ್ಣವರ, ಅಮಿತ ಗುಡಗೇರಿ, ಮಹ್ಮದಹನೀಫ್ ಶಿರಹಟ್ಟಿ, ಮಲ್ಲಿಕಸಾಬ್ ಹೆಸರೂರ, ಅಭಿಷೇಕ ಉಮಚಗಿ ಇದ್ದರು. ಪೊಲೀಸ್ ಸಿಬ್ಬಂದಿ ಪ್ರಕಾಶ ಮ್ಯಾಗೇರಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವ್ಯಕ್ಕಿದೆ ಅಮಂಗಳ ನಾಶ ಮಾಡುವ ಶಕ್ತಿ: ಸ್ವರ್ಣವಲ್ಲೀ ಶ್ರೀ
ಪ್ಲಾಸ್ಟಿಕನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ