ಸೋಲು- ಗೆಲುವು ಕ್ರೀಡೆಯ ಸಹಜ ಭಾಗವಾಗಿದ್ದು, ಫಲಿತಾಂಶಕ್ಕಿಂತ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸುವುದು ಮುಖ್ಯ.
ಕಾರವಾರ: ಫುಟ್ಬಾಲ್ ಹಾಗೂ ಬಾಸ್ಕೆಟ್‌ಬಾಲ್‌ನಂತಹ ಚುರುಕಿನ ಕ್ರೀಡೆಗಳಲ್ಲಿ ದೈಹಿಕ ಸಾಮರ್ಥ್ಯದ ಜತೆಗೆ ತಂಡದ ಸಹಕಾರವೂ ಅತ್ಯಂತ ಮುಖ್ಯ. ಆಟಗಾರರು ತಮ್ಮ ದೈಹಿಕ ದೃಢತೆಯನ್ನು ಕಾಪಾಡಿಕೊಂಡು, ಕ್ರೀಡಾಂಗಣದಲ್ಲಿ ತಮ್ಮ ಗರಿಷ್ಠ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.
ನಗರದ ಮಾಲಾದೇವಿ ಮೈದಾನದಲ್ಲಿ ಭಾನುವಾರ ನಡೆದ ಯುವ ಫುಟ್ಬಾಲ್ ಪ್ರತಿಭಾ ಅನ್ವೇಷಣಾ ಟ್ರಯಲ್ಸ್‌ಗೆ ಚಾಲನೆ ನೀಡಿ ಮಾತನಾಡಿದರು. ಸೋಲು- ಗೆಲುವು ಕ್ರೀಡೆಯ ಸಹಜ ಭಾಗವಾಗಿದ್ದು, ಫಲಿತಾಂಶಕ್ಕಿಂತ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸುವುದು ಮುಖ್ಯ. ಕ್ರೀಡೆಯ ಮೂಲಕ ಶಿಸ್ತು, ತಂಡದ ಮನೋಭಾವ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕರ್ನಾಟಕದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದ ಯುವ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಇಂಡಿಯಾ ಖೇಲೋ ಫುಟ್‌ಬಾಲ್ ಹಾಗೂ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಜಂಟಿಯಾಗಿ ‘ಟೈಗರ್ ಐಕೆಎಫ್- ಕೆಎಸ್ಎಫ್‌ಎ ನಮ್ಮ ಕರ್ನಾಟಕ ಟ್ರಯಲ್ಸ್ ಸೀಸನ್- 6’ ಆಯೋಜಿಸಿತ್ತು. ಬೋಲ್ಡ್ ಆ್ಯಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಕಾರವಾರದ ಮಾಲಾದೇವಿ ಮೈದಾನದಲ್ಲಿ ಟ್ರಯಲ್ಸ್ ನಡೆಯಿತು.2009ರಿಂದ 2016ರ ಅವಧಿಯಲ್ಲಿ ಜನಿಸಿದ ಬಾಲಕ- ಬಾಲಕಿಯರಿಗೆ ಈ ಉಚಿತ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ರಾಜ್ಯದ 12 ವಿವಿಧ ಪ್ರದೇಶಗಳಲ್ಲಿ ನಡೆಯಲಿರುವ ಪ್ರತಿಭಾ ಅನ್ವೇಷಣಾ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಆಟಗಾರರಿಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಫೈನಲ್ಸ್‌ನಲ್ಲಿ ಐ- ಲೀಗ್ ಹಾಗೂ ಪ್ರಮುಖ ವೃತ್ತಿಪರ ಫುಟ್ಬಾಲ್ ಕ್ಲಬ್‌ಗಳ ಪ್ರತಿನಿಧಿಗಳ ಮುಂದೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ದೊರೆಯಲಿದೆ.ಕಾರವಾರದಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚು ಯುವ ಆಟಗಾರರು ಭಾಗವಹಿಸಿದ್ದು ವಿಶೇಷವಾಗಿತ್ತು. ಆಟಗಾರರ ಕೌಶಲ್ಯ, ದೈಹಿಕ ಸಾಮರ್ಥ್ಯ ಹಾಗೂ ಆಟದ ಪ್ರದರ್ಶನವನ್ನು ತಜ್ಞರು ಪರಿಶೀಲಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಲ್ಡ್ ಆ್ಯಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪಿ.ವಿ. ಪ್ರಜಿತ್ ವಹಿಸಿದ್ದರು. ಉಪಾಧ್ಯಕ್ಷ ಲಿಯೋ ಎಫ್. ಲೂಯಿಸ್ ಸ್ವಾಗತಿಸಿದರು. ಸಂಯೋಜಕ ಸ್ಯಾಮ್ಸನ್ ಜೆ. ಡಿ’ಸೋಜಾ, ಕಾರ್ಯದರ್ಶಿ ಅಕ್ವಿಲ್ ಫರ್ನಾಂಡಿಸ್, ಉಪಾಧ್ಯಕ್ಷ ಆಂಥೋನಿ ಡಿ’ಕೋಸ್ಟಾ, ಕ್ರಿಸ್ಟೋಫರ್ ಡಿ’ಸಿಲ್ವಾ, ಅಲ್ಫೋನ್ಸೊ ಫರ್ನಾಂಡಿಸ್ ಹಾಗೂ ನಿವೃತ್ತ ಕ್ರೀಡಾ ತರಬೇತುದಾರ ಪ್ರಕಾಶ್ ರೇವಣಕರ್ ಉಪಸ್ಥಿತರಿದ್ದರು.ಇಂಡಿಯಾ ಖೇಲೋ ಫುಟ್‌ಬಾಲ್‌ನ ಟ್ಯಾಲೆಂಟ್ ಸ್ಕೌಟಿಂಗ್ ಅಧಿಕಾರಿಗಳಾದ ಯದುವೀರ್ ಕೃಷ್ಣ ಹಾಗೂ ಡೇನಿಯಲ್ ಆಟಗಾರರ ಪ್ರತಿಭೆಯನ್ನು ಪರಿಶೀಲಿಸಿದರು. ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವೀಡಿಯೊ ರೆಕಾರ್ಡಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಡಾ. ಲಿಯಾಂಡರ್ ಎ.ಆರ್. ಲೂಯಿಸ್ ನೇತೃತ್ವದ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ಹಾಗೂ ಆಂಬ್ಯುಲೆನ್ಸ್ ಸೇವೆಯೊಂದಿಗೆ ಸ್ಥಳದಲ್ಲಿ ಸನ್ನದ್ಧವಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.