ರಾಜೀನಾಮೆ ನೀಡಲು ನಾನು ಸಿದ್ಧ: ತಂಗಡಗಿ ಸವಾಲು

KannadaprabhaNewsNetwork |  
Published : Sep 07, 2026, 02:30 AM IST
ಶಿವರಾಜ ತಂಗಡಗಿ | Kannada Prabha

ಸಾರಾಂಶ

ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಹರಿಹಾಯ್ದಿರುವ ಸಚಿವ ಶಿವರಾಜ ತಂಗಡಗಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕೊಪ್ಪಳ: ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಹರಿಹಾಯ್ದಿರುವ ಸಚಿವ ಶಿವರಾಜ ತಂಗಡಗಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹೀಗೆಲ್ಲಾ ನಾನೂ ಕೂಡ ''ಲೇ'' ಎನ್ನಬಲ್ಲೆ. ಘನತೆ, ನಡತೆಯಲ್ಲಿ ಅಲ್ಲದಿದ್ದರೂ ವಯಸ್ಸಿನಲ್ಲಿ ನೀವು ಹಿರಿಯ. ಜತೆಗೆ ನನ್ನ ಹಿರಿಯರು ಸಂಸ್ಕಾರ ಕಲಿಸಿರುವುದರಿಂದ ''ಲೇ'' ಎನ್ನುವ ಮಟ್ಟಕ್ಕೆ ನಾ ಇಳಿಯಲಾರೆ ಎಂದಿದ್ದಾರೆ. ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಾಗ ತಮ್ಮುಡು, ತಮ್ಮುಡು ಎಂದು ಗೋಗರೆದು ಬೆಂಬಲ ಕೇಳಿದವನು ನೀನು. ಈಗ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಬೊಗಳೆ ಬಿಡುತ್ತಿದ್ದೀಯಾ? ಎಂದು ಕಿಡಿಕಾರಿದ್ದಾರೆ.

ಯಪ್ಪಾ ಬೊಗಳೆ ದಾಸ, ''ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ಪ್ರಚಾರ ಶೋಕಿಗೆ ವ್ಯರ್ಥ ಪ್ರಲಾಪ ಮಾಡಬೇಡ ಎಂದಿದ್ದಾರೆ.

ನಿನಗೆ ನೇರ ಸವಾಲು ಹಾಕಿ ಪಂಥಾಹ್ವಾನ ನೀಡುತ್ತಿದ್ದೇನೆ. ನೀನು ''ಯಸ್'' ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ. ಗಣಿ ಲೂಟಿಕೋರ ನೀನು, ಗಂಗಾವತಿಯಲ್ಲಿ ಗೆದ್ದರೆ ಮತದಾರರಿಗೆ ಡಬಲ್ ಬೆಡ್ ರೂಮ್ ಮನೆ ನೀಡ್ತೀನಿ. ಕ್ರಿಕೆಟ್ ಸ್ಟೇಡಿಯಂ ಮಾಡ್ತೀನಿ ಅಂದಿದ್ದೆ ಈಡೇರಿಸಿದ್ದೀಯಾ? ಸುಳ್ಳು ಹೇಳಿಕೊಂಡು ಜೀವನ ಮಾಡೋ ನಿನಗೆ ಇಷ್ಟಿರುವಾಗ ಸ್ವಾಭಿಮಾನದಿಂದ ಬೆಳೆದವನು ನನಗೆ ಎಷ್ಟಿರಬೇಡ? ತಮ್ಮುಡು- ತಮ್ಮುಡು ಎಂದು ಗೊಗರೆದು, ಗೆಲುವಿನ ಸಂಭ್ರಮದಲ್ಲಿದ್ದ‌ ನನ್ನನ್ನು ಕಾಲಿಗೆ ಚಪ್ಪಲಿ ಹಾಕಲೂ ಬಿಡದೇ ನಿಮ್ಮವರು ನನ್ನನ್ನು ಕರೆದುಕೊಂಡು ಬಂದರು.

ನನ್ನ ಬೆಂಬಲ ತೋರಿಸಿ ನೀವು ಅಣ್ಣ ತಮ್ಮ ಇಬ್ಬರೂ ಮಂತ್ರಿ ಆಗುದ್ದೀರಿ. ನಿನಗೆ ತಾಕತ್ತಿದ್ದರೆ ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಎಷ್ಟು ಕರೆ ಮಾಡಿದ್ದೀಯ? ಯಾರಿಗೆ ವೋಟ್ ಹಾಕಿದ್ಯಾ? ಕಾಲ್ ಲಿಸ್ಟ್ ತೆಗೆದು ಬಹಿರಂಗ ಪಡಿಸು. ನಿನ್ನ ಯೋಗ್ಯತೆ, ಪಕ್ಷವಿರೋಧಿ ಬೂಟಾಟಿಕೆ ರಾಜ್ಯದ ಜನತೆಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೆ ತಿಳಿಯಲಿ ಎಂದು ಸವಾಲು ಹಾಕಿದ್ದಾರೆ.

ತಂಗಡಗಿ, ನಾಗೇಂದ್ರ ರಾಜೀನಾಮೆ ನೀಡಲಿ: ಜನಾರ್ದನ ರೆಡ್ಡಿ

ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಾಗೇಂದ್ರ ಅವರು ಕನಕಗಿರಿ ಕ್ಷೇತ್ರದ ಯುವಕನ ಪಾದದ ಧೂಳಿಗೂ ಸಮನಲ್ಲ. ಬಿಜೆಪಿ 2004ರಲ್ಲಿ ಯಡಿಯೂರಪ್ಪ ಅವರ ಕಾಲದಲ್ಲಿ 29 ವರ್ಷದ ಶ್ರೀರಾಮುಲು ಅವರನ್ನು ಸಚಿವರನ್ನಾಗಿ ಮಾಡಿತ್ತು. ಬಿಜೆಪಿ ದಲಿತ ವಿರೋಧಿ ಪಕ್ಷವಲ್ಲ ಎಂದರಲ್ಲದೇ, ಶಿವರಾಜ ತಂಗಡಗಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೆಡ್ಡಿ, ತಂಗಡಗಿಗೆ ಪ್ರಾಮಾಣಿಕತೆ ಇದ್ದರೆ ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಲಿ ಎಂದು ಸವಾಲು ಹಾಕಿದರು. ತಂಗಡಗಿ ಮೊದಲ ಬಾರಿಗೆ ಶಾಸಕರಾಗಲು ತಮ್ಮ ಬೆಂಬಲ ಹಾಗೂ ಆಶೀರ್ವಾದ ಕಾರಣ ಎಂದು ಹೇಳಿದ ಅವರು, ತಂಗಡಗಿ ಅವರ ಬಾಡಿ ಲ್ಯಾಂಗ್ವೇಜ್ ನೋಡಿದ್ದೇನೆ ಎಂದು ವ್ಯಂಗ್ಯವಾಡಿದರು.

ಗಂಗಾವತಿಯಲ್ಲಿಯೇ ನಿಂತು ತಾವು ಗೆಲ್ಲುವುದಾಗಿ ಹೇಳಿದ ರೆಡ್ಡಿ, ತಂಗಡಗಿ ಮತ್ತು ನಾಗೇಂದ್ರ ರಾಜೀನಾಮೆ ನೀಡಲಿ. ಚುನಾವಣೆಗೆ ಬನ್ನಿ, ಯಾರು ಗೆಲ್ಲುತ್ತಾರೆ ಎಂಬುದು ನೋಡೋಣ. ತಾವು ಚುನಾವಣೆಗೆ ಸಿದ್ಧವಾಗಿದ್ದು, ತಂಗಡಗಿ ಅವರ ಠೇವಣಿ ಕಳೆದುಕೊಳ್ಳಲಿದೆ ಎಂದು ಸವಾಲು ಹಾಕಿದರು.

ವಾಲ್ಮೀಕಿ ನಿಗಮದ ಹಣವನ್ನು ಗೋವಾ ಮತ್ತು ತೆಲಂಗಾಣ ಚುನಾವಣೆಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ ಅವರು, ಆ ಹಣವನ್ನು ವಾಪಸ್ ನೀಡಿ ರಾಜ್ಯದ ಜನರ ಮುಂದೆ ತಲೆ ತಗ್ಗಿಸಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ ವೃದ್ಧಿ: ಎಸ್ಪಿ ದೀಪನ್ ಎಂ.ಎನ್.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಜಾಸೇವಾ ಆಂದೋಲನದಲ್ಲಿ 1383 ಅರ್ಜಿ ಸಲ್ಲಿಕೆ