ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಗರಿಷ್ಠ 451 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಗೆ 270, ನಗರಾಭಿವೃದ್ಧಿ ಇಲಾಖೆಗೆ 135, ವಸತಿ ಇಲಾಖೆಗೆ 128 ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 102 ಅರ್ಜಿಗಳು ಬಂದಿವೆ.
ಕಾರವಾರ: ಜಿಲ್ಲಾದ್ಯಂತ ಸೆ. 5ರಂದು ನಡೆದ ‘ಪ್ರಜಾ ಸೇವಾ ಆಂದೋಲನ’ ಸಭೆಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿವಿಧ ಇಲಾಖೆಗಳ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಒಟ್ಟು 1,383 ಅರ್ಜಿಗಳು ಸಲ್ಲಿಕೆಯಾಗಿವೆ. ಸದ್ಯ ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ.ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಂಕೋಲಾದಲ್ಲಿ ಮತ್ತು ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ಹಾಗೂ ಹಳಿಯಾಳ ತಾಲೂಕುಗಳ ವಿವಿಧ ಹೋಬಳಿಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಗಳು ನಡೆದವು. ಸಭೆಗಳಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಿದರು.ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಗರಿಷ್ಠ 451 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಗೆ 270, ನಗರಾಭಿವೃದ್ಧಿ ಇಲಾಖೆಗೆ 135, ವಸತಿ ಇಲಾಖೆಗೆ 128 ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 102 ಅರ್ಜಿಗಳು ಬಂದಿವೆ.ಹೆಸ್ಕಾಂ ಇಲಾಖೆಗೆ 51, ಲೋಕೋಪಯೋಗಿ ಇಲಾಖೆಗೆ 50, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 46 ಹಾಗೂ ಸಾರಿಗೆ ಇಲಾಖೆಗೆ 30 ಅರ್ಜಿಗಳು ಸಲ್ಲಿಕೆಯಾಗಿವೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 27, ಸಣ್ಣ ನೀರಾವರಿ ಇಲಾಖೆಗೆ 13, ಕಾರ್ಮಿಕ ಇಲಾಖೆಗೆ 12, ಕೌಶಲ್ಯಾಭಿವೃದ್ಧಿ ಇಲಾಖೆಗೆ 12 ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 10 ಅರ್ಜಿಗಳು ಬಂದಿವೆ.ಅರಣ್ಯ ಇಲಾಖೆಗೆ 7, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 6, ಡಿಪಿಎಆರ್(ಇ- ಆಡಳಿತ) ಹಾಗೂ ಜಲಸಂಪನ್ಮೂಲ ಇಲಾಖೆಗೆ ತಲಾ 5, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4 ಅರ್ಜಿಗಳು ಸಲ್ಲಿಕೆಯಾಗಿವೆ. ಕೃಷಿ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ತಲಾ 3 ಅರ್ಜಿಗಳು ಬಂದಿದ್ದು, ಸಹಕಾರ, ಮೂಲ ಸೌಕರ್ಯ, ಸಮಾಜ ಕಲ್ಯಾಣ, ಹಣಕಾಸು, ಗೃಹ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಲಾ 2 ಅರ್ಜಿಗಳು ಮತ್ತು ಐಟಿ- ಬಿಟಿ ಇಲಾಖೆಗೆ 1 ಅರ್ಜಿ ಸಲ್ಲಿಕೆಯಾಗಿದೆ.ಸಲ್ಲಿಕೆಯಾಗಿರುವ ಎಲ್ಲ 1,383 ಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾಲಮಿತಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅರ್ಹತೆ ಹಾಗೂ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಜಿಲ್ಲೆಯ ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶನಿವಾರ ನಡೆದ ‘ಪ್ರಜಾಸೇವಾ ಆಂದೋಲನ’ ಪ್ರಮುಖ ಹೆಜ್ಜೆಯಾಗಿದ್ದು, ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಹೇಗೆ ನಡೆಯಲಿದೆ ಎನ್ನುವುದರ ಮೇಲೆ ಪ್ರಜಾಸೇವೆಯ ಯಶಸ್ಸು ಅವಲಂಬಿಸಿದೆ.