ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿಯ ಕೊಟ್ಟೂರು ಕೆರೆ ಸೇರಿದಂತೆ ತಾಲೂಕಿನ ೧೬ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತರುವ ಯೋಜನೆಯ ಜಾರಿಯ ನಿಟ್ಟಿನಲ್ಲಿ ತುರ್ತು ಆಡಳಿತಾತ್ಮಕ ಅನುಮತಿ ನೀಡುವಂತೆ ಒತ್ತಾಯಿಸಿ ತಾವು ಸಲ್ಲಿಸಿರುವ ಮನವಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕ್ಷೇತ್ರದ ಶಾಸಕ ನೇಮಿರಾಜನಾಯ್ಕ ತಿಳಿಸಿದರು.
ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟದ ಕುಸಿತದಿಂದ ಕ್ಷೇತ್ರದ ಕೃಷಿ ಚಟುವಟಿಕೆ ಕ್ಷೀಣವಾಗಿ ಇಡೀ ಕ್ಷೇತ್ರದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೀಡಾಗಿರುವ ಕುರಿತು ಶನಿವಾರ ಕೂಡ್ಲಿಗಿಯಲ್ಲಿ ನಡೆದಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಯೋಜನೆಯ ಜಾರಿಯ ಮೂಲಕ ಕೆರೆಗಳಿಗೆ ನೀರು ಲಭ್ಯವಾದರೆ ಬೆಳೆ ಹಾನಿ ಪರಿಹಾರಕ್ಕಾಗಿ ರೈತರು ಸರ್ಕಾರದ ಮುಂದೆ ಕೈಚಾಚುವ ಪರಿಸ್ಥಿತಿ ತಪ್ಪುತ್ತದೆ ಎಂದು ಪ್ರತಿಪಾದಿಸಿದರು.
ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿನ ಮರಬ್ಬಿಹಾಳು ಸಹಿತ ಲಾಡಕನಬಾವಿ ಹಾಗೂ ವರದಾಪುರ ಗ್ರಾಮಗಳ ೮೫೦ ಹೆಕ್ಟೇರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ವರದಾಪುರ ಏತ ನೀರಾವರಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು ಎಂದು ಸ್ಮರಿಸಿದ ಶಾಸಕರು, ಈ ಯೋಜನೆಗೆ ಈಗಾಗಲೇ ತುಂಗಭದ್ರಾ ಮಂಡಳಿಯಿಂದ ನದೀ ನೀರಿನ ಸಂಗ್ರಹದ ಪರವಾನಗಿ ಕೂಡಾ ಮಂಜೂರಾಗಿದ್ದು, ಯೋಜನೆಯ ಅಂದಾಜು ಮೊತ್ತ ₹೭೦ ಕೋಟಿ ಅನುದಾನ ತುರ್ತಾಗಿ ಒದಗಿಸುವಂತೆ ಕೂಡಾ ಮುಖ್ಯಮಂತ್ರಿಗಳ ಬಳಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.ಇದಕ್ಕೂ ಮುನ್ನ ತಾಲೂಕಿನ ಕೆಚ್ಚಿನಬಂಡಿ, ಗುಳೇದಾಳು, ಹಲಗಾಪುರ ಗ್ರಾಮಗಳಲ್ಲಿ ಕೆಕೆಆರ್‌ಡಿಬಿ ಯೋಜನೆಯ ತಲಾ ₹೫೦ ಲಕ್ಷ ಅನುದಾನದ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.