ನಾರಾಯಣ ಹೆಗಡೆ
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದರ ಜತೆಗೆ, ಅವರು ನಿರ್ವಹಿಸಿದ ಕೆಲಸಕ್ಕೆ ತ್ವರಿತವಾಗಿ ಕೂಲಿ ಪಾವತಿಸುವ ಉದ್ದೇಶ ಹೊಂದಿರುವ ವಿಬಿ ಜಿ ರಾಮ್ ಜಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಯೋಜನೆ ಆರಂಭವಾಗಿ ಒಂದೇ ತಿಂಗಳಲ್ಲಿ 2.35 ಲಕ್ಷ ಮಾನವ ದಿನಗಳು ಸೃಜನೆಯಾಗಿದ್ದು, ₹ 7.04 ಕೋಟಿ ಪಾವತಿ ಪ್ರಕ್ರಿಯೆ ನಡೆದಿದೆ.
ಜು.1ರಿಂದ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಆಜಿವಿಕಾ ಮಿಶನ್ (ವಿಬಿ ಜಿ ರಾಮ್ ಜಿ) ಯೋಜನೆ ಆರಂಭವಾಗಿದೆ. ಈ ಸಲ ಬರಗಾಲ ಪರಿಸ್ಥಿತಿ ಇರುವುದರಿಂದ ಕೂಲಿ ಕಾರ್ಮಿಕರ ವಲಸೆ ತಡೆಗಟ್ಟಿ, ಸ್ಥಳೀಯವಾಗಿಯೇ ಉದ್ಯೋಗ ಭರವಸೆ ಒದಗಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾಬ್ ಕಾರ್ಡ್ ಅಭಿಯಾನ, 125 ದಿನಗಳ ಕೂಲಿ ನೀಡುವ ಕಾರ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದೆ. ಇದರಿಂದ ಯೋಜನೆ ಆರಂಭವಾಗಿ ಒಂದೇ ತಿಂಗಳಲ್ಲಿ 2.35 ಲಕ್ಷ ಮಾನವ ದಿನಗಳು ಆಗಿವೆ. ಕೂಲಿ ಪಾವತಿಗಾಗಿ ಸಿದ್ಧಪಡಿಸಿರುವ ಒಟ್ಟು ₹7 ಕೋಟಿ ಮೊತ್ತದಲ್ಲಿ ₹4.35 ಕೋಟಿ ಮೊತ್ತವನ್ನು ಖಜಾನೆಗೆ ಸಲ್ಲಿಸಲಾಗಿದೆ. ಇನ್ನು ವಾರದೊಳಗಾಗಿ ಈ ಹಣ ಕೂಲಿಕಾರರ ಖಾತೆಗೆ ಜಮಾ ಆಗುವ ನಿರೀಕ್ಷೆಯಿದೆ.ಯೋಜನೆಯಡಿ ಕೂಲಿ ಪಾವತಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಎಫ್‌ಟಿಒ (ಫಂಡ್ ಟ್ರಾನ್ಸ್‌ಫರ್ ಆರ್ಡರ್) ಗಳ ತಾಲೂಕುವಾರು ಅಂಕಿ-ಅಂಶಗಳು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೂಲಿ ಪಾವತಿ ಪ್ರಕ್ರಿಯೆ ಚುರುಕುಗೊಂಡಿರುವುದನ್ನು ತೋರಿಸುತ್ತಿವೆ.
ಉಳಿದಂತೆ ಹಾವೇರಿಯಲ್ಲಿ ₹63,22,272, ಹಾನಗಲ್ಲಿನಲ್ಲಿ ₹53,52,647, ಸವಣೂರಿನಲ್ಲಿ ₹43,56,929 ಹಾಗೂ ಶಿಗ್ಗಾಂವಿಯಲ್ಲಿ ₹34,58,547 ಮೊತ್ತದ ಎಫ್‌ಟಿಒಗಳಿಗೆ ಎರಡನೇ ಸಹಿ ಆಗಿದೆ.
ರಾಣಿಬೆನ್ನೂರಿನಲ್ಲಿ ₹75,05,931, ಬ್ಯಾಡಗಿಯಲ್ಲಿ ₹73,81,905 ಹಾಗೂ ಹಿರೇಕೆರೂರಿನಲ್ಲಿ ₹68,04,943 ಮೊತ್ತದ ಎಫ್‌ಟಿಒಗಳು ಖಜಾನೆಗೆ ಸಲ್ಲಿಕೆಯಾಗಿವೆ. ಹಾವೇರಿಯಲ್ಲಿ ₹42,53,476, ಸವಣೂರಿನಲ್ಲಿ ₹30,47,067, ಶಿಗ್ಗಾಂವಿಯಲ್ಲಿ ₹32,14,755 ಹಾಗೂ ಹಾನಗಲ್ಲಿನಲ್ಲಿ ₹25,44,793 ಮೊತ್ತದ ಎಫ್‌ಟಿಒಗಳು ಖಜಾನೆ ಹಂತ ತಲುಪಿವೆ.
ಎಫ್‌ಟಿಒಗಳ ಮುಂದಿನ ಹಂತದ ಪ್ರಕ್ರಿಯೆ ಪೂರ್ಣಗೊಂಡಂತೆ ಕೂಲಿ ಹಣವು ಸಂಬಂಧಿಸಿದ ಕಾರ್ಮಿಕರ ಖಾತೆಗಳಿಗೆ ಜಮೆಯಾಗುವ ನಿರೀಕ್ಷೆಯಿದೆ. ಯೋಜನೆ ಆರಂಭದ ಹಂತದಲ್ಲೇ ಕಂಡುಬಂದಿರುವ ಈ ವೇಗ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗದ ಜತೆಗೆ ಅವರ ಶ್ರಮದ ಪ್ರತಿಫಲ ತಲುಪಿಸುವ ಪ್ರಕ್ರಿಯೆ ಚುರುಕುಗೊಂಡಿರುವುದನ್ನು ಸೂಚಿಸುತ್ತದೆ.
ಖಜಾನೆಗೆ ಸಲ್ಲಿಕೆಯಾಗಿರುವ ಎಫ್‌ಟಿಒಗಳ ಮೊತ್ತವನ್ನು ಟ್ರೆಜರಿಯಿಂದ ಆರ್‌ಬಿಐ (ಮತ್ತು ಪಿಎಫ್‌ಎಂಎಸ್ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಹಣ ತಲುಪುವ ಪ್ರಕ್ರಿಯೆ ಸರಳಗೊಂಡಿದೆ.