ರಾಷ್ಟ್ರಮಟ್ಟದ ದಸರಾ ಕುಸ್ತಿ: ಬಿಜಾಪುರ ರಾಮಚಂದ್ರಗೆ ಬೆಳ್ಳಿಗದೆ

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ 48ನೇ ವರ್ಷದ ರಾಷ್ಟ್ರಮಟ್ಟದ ದಸರಾ ಕುಸ್ತಿ
ಸಾಗರ: ಪಟ್ಟಣದ ಗಾಂಧಿನಗರ ಯುವಜನ ಸಂಘವು ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ 48ನೇ ವರ್ಷದ ರಾಷ್ಟ್ರಮಟ್ಟದ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಬಿಜಾಪುರದ ರಾಮಚಂದ್ರ ಬೆಳ್ಳಿಗದೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೋಷನ್ ಮಾಸೂರು ಹಾಗೂ ರಾಮಚಂದ್ರ ಬಿಜಾಪುರ ಅವರ ನಡುವೆ ನಡೆದ ಹಣಾಹಣಿಯಲ್ಲಿ ರಾಮಚಂದ್ರ ಬಿಜಾಪುರ ಗೆದ್ದು, ಬೆಳ್ಳಿಗದೆ ಹೆಗಲೇರಿಸಿಕೊಂಡರು. ಅಕ್ರಂ ಮಾಸೂರು ಮತ್ತು ಪ್ರೇಮ್ ಕುಮಾರ್ ನಡುವೆ ನಡೆದ ಪರ್ಸಿ ಬಳೆ ಕುಸ್ತಿಯಲ್ಲಿ ಅಕ್ರಂ ಮಾಸೂರು ಗೆಲುವು ಸಾಧಿಸಿದರೆ, ಮೂಡಬಿದರೆಯ ಚನ್ನಕಿಶೋರ್ ಮತ್ತು ಪ್ರವೀಣ್ ಶಿಕಾರಿಪುರ ಅವರ ನಡುವೆ ನಡೆದ ಅಖಾಡ ಬಳೆ ಕುಸ್ತಿಯಲ್ಲಿ ಚನ್ನಕಿಶೋರ್ ಗೆಲುವು ದಾಖಲಿಸಿದರು. ವಿಶೇಷ ಬಳೆಗಾಗಿ ಪರಶುರಾಮ ದಾವಣಗೆರೆ ಮತ್ತು ಸಿದ್ದಪ್ಪ ಅವರ ನಡುವೆ ನಡೆದ ಹಣಾಹಣಿಯಲ್ಲಿ ಪರಶುರಾಮ ದಾವಣಗೆರೆ ಗೆಲುವು ಸಾಧಿಸಿದರು. ಪಂದ್ಯಾವಳಿಯಲ್ಲಿ 150ಕ್ಕೂ ಹೆಚ್ಚು ಪೈಲ್ವಾನರು ದೇಶದ ಮೂಲೆಮೂಲೆಗಳಿಂದ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಮಹಿಳಾ ಕುಸ್ತಿಯಲ್ಲಿ ಶಿವಮೊಗ್ಗ, ಸಾಗರ, ಆನವಟ್ಟಿ, ಗದಗ, ದಾವಣಗೆರೆ ಸೇರಿದಂತೆ ವಿವಿಧ ಭಾಗಗಳಿಂದ 20ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಪಂದ್ಯಾವಳಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸಂತೋಷ್ ಸದ್ಗುರು ಅಧ್ಯಕ್ಷತೆ ವಹಿಸಿದ್ದರು. ಧರ್ಮರಾಜ್, ಆರ್.ಶ್ರೀನಿವಾಸ್ ಮೇಸ್ತ್ರಿ, ಮಧುಮಾಲತಿ, ಸತೀಶಕುಮಾರ್, ಸೈಯದ್ ಜಾಕಿರ್, ಪ್ರಕಾಶ್ ಎಂ.ಎನ್., ವೆಂಕಟೇಶ್, ಸಂತೋಷ್ ಕೆ.ಜಿ. ಇನ್ನಿತರರು ಪಾಲ್ಗೊಂಡಿದ್ದರು. ಪಂದ್ಯದ ತೀರ್ಪುಗಾರರಾಗಿ ಬಿ.ದೇವೇಂದ್ರ, ಸುಂದರ ಸಿಂಗ್, ಲೋಕೇಶ್ ಇನ್ನಿತರರು ಕಾರ್ಯನಿರ್ವಹಿಸಿದರು. - - - -25ಕೆ.ಎಸ್.ಎ.ಜಿ.1: ಕುಸ್ತಿ ಪಂದ್ಯಾವಳಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು.

Share this article