ಗದಗ: ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿರುವ ಕುಸ್ತಿ ಕಲೆ ಕೇವಲ ಕ್ರೀಡೆಯಲ್ಲ, ಅದು ಶಿಸ್ತು, ಧೈರ್ಯ, ದೈಹಿಕ ಸದೃಢತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಮಹತ್ವದ ಪರಂಪರೆ. ಇಂತಹ ಅಮೂಲ್ಯ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜು. 6ರಂದು ನಗರದಲ್ಲಿ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಆದಪ್ಪ ಮಾರೆಪ್ಪನವರ ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಕುಸ್ತಿ ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿವಿಧ ರಾಜ್ಯಗಳಿಂದ ಹೆಸರಾಂತ ಕುಸ್ತಿಪಟುಗಳು ಜು. 5ರಂದು ಗದುಗಿಗೆ ಆಗಮಿಸಲಿದ್ದು, ಜು. 6ರಂದು ಮಧ್ಯಾಹ್ನ 3ಕ್ಕೆ ವೀರೇಶ್ವರ ಪುಣ್ಯಾಶ್ರಮದ ಸಮೀಪದ ಕುಸ್ತಿ ಮೈದಾನದಲ್ಲಿ(ಕೆ.ಎಚ್.ಪಾಟೀಲ ಸಭಾಭವನದ ಎದುರಿಗೆ) ಪಂದ್ಯಗಳು ಜರುಗಲಿವೆ. ಹಿರಿಯ ಅನುಭವಿಕ ಪೈಲ್ವಾನರು, ನಿರ್ಣಾಯಕರ ಮಾರ್ಗದರ್ಶನದಲ್ಲಿ ಶಿಸ್ತಿನಿಂದ ಹಾಗೂ ಕ್ರೀಡಾಸ್ಫೂರ್ತಿಯಿಂದ ಕುಸ್ತಿಗಳನ್ನು ನಡೆಸಲಾಗುವುದು ಎಂದರು.
ಸಮಿತಿಯ ಉಪಾಧ್ಯಕ್ಷ ಮಕ್ತುಂಸಾಬ ನಾಗನೂರ, ಕಾರ್ಯದರ್ಶಿ ಇಮಾಮಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ, ಹಮಾಲರ ಒಕ್ಕೂಟದ ರಾಜ್ಯಾಧ್ಯಕ್ಷ ಅಯ್ಯಪ್ಪ ನಾಯ್ಕರ್, ಮಮ್ಮುಸಾಬ ವಾಲೀಕಾರ, ಇಮಾಮಹುಸೇನ ರೋಣದ ಹಾಗೂ ರಾಜೇಸಾಬ ಕಣವಿ ಅವರು ಕುಸ್ತಿ ಪಂದ್ಯ ಯಶಸ್ವಿಗೆ ಸಲಹೆ, ಸೂಚನೆ ನೀಡಿದರು.ಸಭೆಯಲ್ಲಿ ಗೋವಿಂದಪ್ಪ ಮುಂಡರಗಿ, ದೇವರಾಜ ಬಿನ್ನಾಳ, ಹುಸೇನಸಾಬ ವಡವಿ, ಬಸವರಾಜ ಸೂಡಿ, ಫಕ್ರುಸಾಬ ಘಟ್ಟದ, ಯಲ್ಲಪ್ಪ ಬೇವಿನಮರದ, ರಾಮಣ್ಣ ವಾಲ್ಮೀಕಿ, ಜಹಾಂಗೀರಸಾಬ ಲಕ್ಷ್ಮೇಶ್ವರ, ಶ್ರೀಕಾಂತ ಸಿಂಗಾಡಿ, ನಾಗಪ್ಪ ಕೊರ್ಲಹಳ್ಳಿ, ಶೇಖಪ್ಪ ವಾಲ್ಮೀಕಿ, ರವಿ ಚಲವಾದಿ, ಮಾರುತಿ ರಾಯಲದೊಡ್ಡಿ, ಸುಭಾಸ ಶೆಗಣಿ, ರಾಘು ಮುಗಳಿ ಮುಂತಾದವರಿದ್ದರು.