ರಾಷ್ಟ್ರೀಯ ಲೋಕ್ ಅದಾಲತ್: 325 ಪ್ರಕರಣಗಳು ಇತ್ಯರ್ಥ

KannadaprabhaNewsNetwork |  
Published : Jul 13, 2026, 12:30 AM IST
12ಕೆಎಂಎನ್ ಡಿ11 | Kannada Prabha

ಸಾರಾಂಶ

ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಅದಾಲತ್‌ನಲ್ಲಿ 140 ಐಪಿಸಿ, 53 ಚೆಕ್ ಬೌನ್ಸ್, ಅಪಘಾತ ಪ್ರಕರಣ 69 ಹಾಗೂ 63 ಸಿವಿಲ್ ವ್ಯಾಜ್ಯಗಳನ್ನು ರಾಜೀಸಂಧಾನದ ಮೂಲಕ ಬಗೆಹರಿಸಿದ ನ್ಯಾಯಾಧೀಶರು ಕಕ್ಷಿಧಾರರಿಗೆ 7,26,84,422 ರು.ಗಳ ಪರಿಹಾರಕ್ಕೆ ಆದೇಶ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಜೆಎಂಎಫ್‌ಸಿ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 325 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿದ ನ್ಯಾಯಾಧೀಶರುಗಳು 7.26 ಲಕ್ಷಕ್ಕೂ ಮೀರಿ ಪರಿಹಾರಕ್ಕೆ ಆದೇಶ ನೀಡಿದರು.

ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಅದಾಲತ್‌ನಲ್ಲಿ 140 ಐಪಿಸಿ, 53 ಚೆಕ್ ಬೌನ್ಸ್, ಅಪಘಾತ ಪ್ರಕರಣ 69 ಹಾಗೂ 63 ಸಿವಿಲ್ ವ್ಯಾಜ್ಯಗಳನ್ನು ರಾಜೀಸಂಧಾನದ ಮೂಲಕ ಬಗೆಹರಿಸಿದ ನ್ಯಾಯಾಧೀಶರು ಕಕ್ಷಿಧಾರರಿಗೆ 7,26,84,422 ರು.ಗಳ ಪರಿಹಾರಕ್ಕೆ ಆದೇಶ ನೀಡಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 36, ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 57, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 72, ಒಂದನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 18, ಎರಡನೆಯ ಅಪರ ಸಿವಿಲ್ ನ್ಯಾಯಾಲಯದಲ್ಲಿ 53, ಮೂರನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 84 ಹಾಗೂ ನಾಲ್ಕನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 5 ಪ್ರಕರಣಗಳು ಒಳಗೊಂಡಂತೆ ಒಟ್ಟು 325 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.

ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಸಿ.ಎಂ.ಪಾರ್ವತಿ, ಎನ್.ಬಿ.ಮೋಹನ್ ಕುಮಾರಿ, ಕೆ.ಗೋಪಾಲಕೃಷ್ಣ, ಎಸ್.ಆರ್.ನಂದಿನಿ ಹಾಗೂ ಎಂ.ಶ್ರುತಿ ಅವರುಗಳು ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಆಗುವ ಪ್ರಯೋಜನಗಳನ್ನು ಕುರಿತು ಉಭಯ ಕಕ್ಷಿದಾರರಿಗೆ ಮನವರಿಕೆ ಮಾಡುವ ಮೂಲಕ ವಿವಾದಗಳನ್ನು ಬಗೆಹರಿಸಿದರು.

ಅದಾಲತ್ ನಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಪ್ರೀತಮ್ ದೇವಿಡ್, ಕಪನಿ ನಂಜೇಶ್ವರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ವಕೀಲರಾದ ಕೆ.ಸ್ವಾಮಿ, ಜಗದೀಶ್, ಯೋಗಾನಂದ, ಮಂಜುಳಾ, ಎಂ. .ಮಹೇಶ್, ಗಿರೀಶ್, ಎ.ಶಿವಣ್ಣ, ವಿಜಯ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಪತಿಯೊಂದಿಗೆ ಒಂದಾಗಿ ಬಾಳ್ವೆ ನಡೆಸಲು ಸಮ್ಮತಿ

ಮದ್ದೂರು:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನ ಮನೆ ತೊರೆದು ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮಹಿಳೆಗೆ ಬುದ್ಧಿ ಮಾತು ಹೇಳಿದ ಹಿನ್ನೆಲೆಯಲ್ಲಿ ಮನಸೋತು ಪತಿಯೊಂದಿಗೆ ಒಂದಾಗಿ ಬಾಳ್ವೆ ನಡೆಸಲು ಸಮ್ಮತಿ ಸೂಚಿಸಿದ ಪ್ರಸಂಗ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾನೂನು ಸೇವಾ ಸಮಿತಿಯಿಂದ ನಡೆದ ಲೋಕ್ ಅದಾಲತ್ ನಲ್ಲಿ ದಂಪತಿಗಳು ಕೆಲವೊಂದು ಷರತ್ತುಗಳೊಂದಿಗೆ ಕಾಲಾವಕಾಶ ಕೋರಿ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದರು.

ತಾಲೂಕು ಅಣ್ಣೂರು ಗ್ರಾಮದ ಸಿಂಧು 2013ರಲ್ಲಿ ಮಹದೇವಸ್ವಾಮಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಂಧು ಅತ್ತೆ-ಮಾವ ಮತ್ತು ಸೊಸೆ ನಡುವಿನ ಹೊಂದಾಣಿಕೆ ಕೊರತೆಯಿಂದ ಗಂಡನ ಮನೆ ತೊರೆದು ಬೇರೆ ಜೀವನ ನಡೆಸುತ್ತಿದ್ದರು.

ತಮ್ಮ ಹಾಗೂ ಮಕ್ಕಳ ಜೀವನ ನಿರ್ವಹಣೆಗಾಗಿ ಮಹದೇವಸ್ವಾಮಿ ಅವರಿಂದ ಜೀವನಾಂಶ ಕೋರಿ ಮದ್ದೂರು ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಕೌಟುಂಬಿಕ ಕಲಹ ಕಾಯ್ದೆ ಅಡಿ ಮೊಕದ್ದಮ್ಮೆದಾಖಲಿಸಿದ್ದರು. ಅದಾಲತ್ ನಲ್ಲಿ ಸಿಂಧೂ ಮತ್ತು ಮಹಹದೇವಸ್ವಾಮಿ ಸಮ್ಮುಖದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ಅವರು ದಂಪತಿಗಳ ಸಮಸ್ಯೆ ಆಲಿಸಿದರು.

ಈ ವೇಳೆ ಸಿಂಧು ತಮ್ಮ ಗಂಡನ ಮನೆಯಲ್ಲಿ ಅತ್ತೆ ಮಾವಂದಿರೊಂದಿಗೆ ಹೊಂದಾಣಿಕೆ ಕೊರತೆ ಇದೆ. ಹೀಗಾಗಿ ಬೇರೆ ಮನೆ ಮಾಡುವುದು, ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರೆ ಗಂಡನೊಂದಿಗೆ ಜೀವನ ನಡೆಸಲು ಸಿದ್ದ ಎಂದು ಹೇಳಿಕೆ ನೀಡಿದರು.

ನಂತರ ನ್ಯಾಯಾಧೀಶರಾದ ಪಾರ್ವತಿಯವರು ಗಂಡನಿಂದ ಬೇರೆಯಾಗಿ ಕೇವಲ ಜೀವನಾಂಶ ಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಕ್ಕಳ ಭವಿಷ್ಯ ಹಾಗೂ ಮುಂದಿನ ಆಗುಹೋಗುಗಳ ಬಗ್ಗೆ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ನಂತರ ದಂಪತಿ ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ತಿಂಗಳ ಕಾಲ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜೀವನಾಂಶದ ಪ್ರಕರಣದ ಅರ್ಜಿ ವಿಚಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಕಕ್ಷಿಧಾರರ ಪರ ವಕೀಲರಾದ ಮಂಜುಳಾ ಹಾಗೂ ಯೋಗಾನಂದ ಕದಲೂರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಬೇಕು: ಹರೀಶ್
2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ: ಸೀಕಲ್ ರಾಮಚಂದ್ರಗೌಡ