- ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಇಡೀ ಜಿಲ್ಲೆಗೆ ಸಂಬಂಧಿಸಿದಂತೆ ಜು.12 ರಂದು ಲೋಕ ಅದಾಲತ್ ನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು. ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ‘ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನವನ್ನು ಮಂಗಳ ವಾರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತೀ ವರ್ಷ ನಾಲ್ಕು ಬಾರಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತದೆ ಎಂದರು.ಈಗಾಗಲೇ ಮೊದಲನೇ ಲೋಕ ಅದಾಲತ್ ಮಾ. 8 ರಂದು ನಡೆದಿದೆ. ಇದೀಗ 2ನೇ ಲೋಕ ಅದಾಲತ್ ಜು. 12 ರಂದು ನಡೆಯಲಿದೆ. ಕಳೆದ ಬಾರಿಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ನ್ಯಾಯಾ ಧೀಶರು, ವಕೀಲರು ಹಾಗೂ ಕಕ್ಷಿದಾರರ ಸಹಕಾರದಿಂದ 3064 ಬಾಕಿ ಉಳಿದಿದ್ದ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 20,962 ಪ್ರಕರಣಗಳು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸೇರಿದ ಒಟ್ಟು 24,026 ಪ್ರಕರಣ ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು. ಈ ಬಾರಿ ನಡೆಯುತ್ತಿರುವ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಿಗೆ ಸಂಬಂಧಿಸಿದ 39,937 ಪ್ರಕರಣ ಗಳು ಬಾಕಿ ಉಳಿದಿವೆ. ಈ ಪೈಕಿ ಶೇ. 10ಕ್ಕಿಂತ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡುವ ಯೋಜನೆ ಇದೆ. ಕೊಲೆ, ಅತ್ಯಾಚಾರದಂತಹ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ತೀರ್ಮಾನವಾಗುವುದಿಲ್ಲ. ಮೋಟಾರು ವಾಹನ ಅಪಘಾತ, ಜೀವನಾಂಶ, ಆಸ್ತಿ ವಿಭಾಗದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳನ್ನು ಈ ಅದಾಲತ್‌ನಲ್ಲಿ ವಿಲೇವಾರಿ ಮಾಡಬಹುದು ಎಂದು ತಿಳಿಸಿದರು. ಲೋಕ ಅದಾಲತ್‌ನಲ್ಲಿ ಪ್ರಕರಣಗಳು ಅತೀ ಶೀಘ್ರ ಇತ್ಯರ್ಥವಾಗುತ್ತವೆ. ನ್ಯಾಯಾಲಯದ ಶುಲ್ಕಇರುವುದಿಲ್ಲ. ಕೆಲವರಿಗೆ ವಕೀಲರ ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಲೋಕ ಅದಾಲತ್‌ನಲ್ಲಿ ನುರಿತ ವಕೀಲರು ಸಂಧಾನ ಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಸಮಯ ಉಳಿತಾಯವಾಗಲಿದ್ದು, ಕಕ್ಷಿದಾರರು ಅವರ ತೀರ್ಪನ್ನು ಅವರೇ ಪಡೆದುಕೊಳ್ಳಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಉಭಯ ಕಡೆಯ ಕಕ್ಷಿ ದಾರರ ನಡುವೆ ಬಾಂಧವ್ಯವೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕಕ್ಷಿದಾರರು ಈ ಅದಾಲತ್‌ನ ಪ್ರಯೋಜನ ಪಡೆದು ಕೊಳ್ಳುವಂತೆ ಕಿವಿಮಾತು ಹೇಳಿದರು.
90 ದಿನಗಳ ವಿಶೇಷ ಅಭಿಯಾನ: ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಮಧ್ಯಸ್ಥಿಕೆಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ‘ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನವನ್ನು ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ. ಇದರಲ್ಲಿ ವಕೀಲರೇ ಮಧ್ಯಸ್ಥಿಕೆ ವಹಿಸಲಿದ್ದು, ಅಪಘಾತ ಪ್ರಕರಣ, ಕೌಟುಂಬಿಕ ದೌರ್ಜನ್ಯ, ಚೆಕ್ ಬೌನ್ಸ್ ಪ್ರಕರಣ, ವಾಣಿಜ್ಯ ಕಲಹ ಪ್ರಕರಣ, ಸೇವಾ ವಿಷಯದ ಪ್ರಕರಣ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣ, ಗ್ರಾಹಕರ ವ್ಯಾಜ್ಯ, ಸಾಲ ಮರುಪಾವತಿ ವ್ಯಾಜ್ಯ, ವಿಭಾಗದ ದಾವೆ, ಎವಿಕ್ಷನ್ ದಾವೆ, ಭೂಸ್ವಾಧೀನ ದಾವೆ, ಇತರ ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಈ ಅಭಿಯಾನ ಜುಲೈ ಒಂದರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದೆ. ಪ್ರಕರಣಗಳ ಸ್ವರೂಪ ಗುರುತಿಸಿ ಅವುಗಳನ್ನು ಮಧ್ಯಸ್ಥಿಕೆದಾರರಿಗೆ ಕಳುಹಿಸಲಾಗುವುದು. ಮಧ್ಯಸ್ಥಿಕೆ ದಾರರಿಂದ ಪಕ್ಷಗಾರರಿಗೆ ನೋಟಿಸು ಜಾರಿಯಾಗುತ್ತದೆ. ವಾರದ 7 ದಿನಗಳಲ್ಲಿ ಮಧ್ಯಸ್ಥಿಕಾ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಸಂಘರ್ಷ ಎನ್ನುವುದು ಮಕ್ಕಳಿಂದ ಪ್ರಾರಂಭವಾಗುತ್ತದೆ. ಮಾನವ ಸಹಜವಾಗಿಯೇ ಸಂಘರ್ಷ ಜೀವಿ. ಐಶ್ವರ್ಯ, ಬಡತನ, ಮಧ್ಯಸ್ಥಿಕೆಯಲ್ಲಿದ್ದರೂ ಸಂಘರ್ಷವೆ. ಕಕ್ಷಿದಾರರು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆ, ಆಸ್ಪತ್ರೆ, ನ್ಯಾಯಾಲಯ ಈ ಮೂರರ ಮೆಟ್ಟಿಲೇರು ವಂತಹ ಸನ್ನಿವೇಶ ತಂದುಕೊಳ್ಳಬಾರದು. ಆಸ್ತಿ ವಿಭಾಗದಲ್ಲಿ ಉಂಟಾಗುವ ಪ್ರಕರಣಗಳನ್ನು ಆಯಾ ಕುಟುಂಬದವರೇ ಇತ್ಯರ್ಥಪಡಿಸಿಕೊಳ್ಳಬಹುದು. ಇದೀಗ ಲೋಕ ಅದಾಲತ್ ಮೂಲಕ ರಾಜಿ ಸಂಧಾನ, ಮಧ್ಯಸ್ಥಿಕೆ ಮೂಲಕ ಪ್ರಕರಣಗಳ ಇತ್ಯರ್ಥಪಡಿಸಿಕೊಂಡು ಕಕ್ಷಿದಾರರು ಹಣ, ಸಮಯ ಉಳಿತಾಯ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಭಾನುಮತಿ, ನ್ಯಾಯಾಧೀಶರಾದ ಪ್ರಕಾಶ್, ಮಂಜುನಾಥ, ಕುಲಕರ್ಣಿ, ಗುರುಪ್ರಸಾದ್, ರಾಘವೇಂದ್ರ, ಸುಜಾತಾ, ದ್ಯಾವಪ್ಪ, ಲತಾ, ಅನುರಾಧ, ಶರತ್ ಕುಮಾರ್, ನಂದಿನಿ ಹಾಗೂ ವಕೀಲರು ಭಾಗವಹಿಸಿದ್ದರು,8 ಕೆಸಿಕೆಎಂ 5
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ನಡೆದ ‘ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.