ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜುಲೈ 12ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತ್ವರಿತ ನ್ಯಾಯಕ್ಕಾಗಿ ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮೂಡುಬಿದಿರೆ ಮತ್ತು ಸುಳ್ಯ ನ್ಯಾಯಾಲಯಗಳ ಆವರಣಗಳಲ್ಲಿ ಆದಾಲತ್ ಆಯೋಜಿಸಲಾಗಿದೆ.ಸಾರ್ವಜನಿಕರು ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಹಾಗೂ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಅತಿ ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮುಖಾಂತರ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳು: ಮೋಟಾರು ವಾಹನ ಅಪಘಾತ ಪ್ರಕರಣಗಳು, ಚೆಕ್ ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಅಕ್ರಮ ಮರಳು ಸಾಗಾಟ ಪ್ರಕರಣ, ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು, ವಿಚ್ಚೇದನ ಪ್ರಕರಣವನ್ನು ಹೊರತುಪಡಿಸಿ ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಗ್ರಾಹಕರ ವಿವಾದ, ಭೂ ಸ್ವಾಧೀನ ಹಾಗೂ ಭೂ ಸ್ವಾಧೀನ ಪರಿಹಾರ ಹಂಚಿಕೆ, ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಪಟ್ಟ ಪ್ರಕರಣಗಳು, ವೇತನ ಭತ್ಯೆ ಸೇವಾ ಪ್ರಕರಣಗಳು ಹಾಗೂ ಪಿಂಚಣಿ, ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು, ಕಾನೂನಾತ್ಮಕವಾಗಿ ರಾಜೀಯಾಗಬಲ್ಲ ಎಲ್ಲಾ ರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು.ಇದರಲ್ಲಿ ನ್ಯಾಯಾಧೀಶರು ಹಾಗೂ ಸಂಬಂಧಪಟ್ಟ ಪ್ರಕರಣಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸುತ್ತಾರೆ. ಇಬ್ಬರು ಪಕ್ಷಗಾರರು ಪ್ರಕರಣವನ್ನು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಪಕ್ಷಗಾರರಿಗೆ ಒಪ್ಪಿಗೆಯಾಗುವಂತೆ ವಿವಾದಗಳು ಇತ್ಯರ್ಥವಾಗುವುದರಿಂದ ಇಬ್ಬರ ಸಂಬಂಧವು ಉಳಿದು ಇಬ್ಬರು ಗೆದ್ದ ಮನೋಭಾವದಿಂದ ಸಂತೋಷವಾಗಿರಬಹುದು.
* ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು ಹಾಗೂ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಇರುವುದಿಲ್ಲ.* ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಪಡೆದುಕೊಂಡು ತಮ್ಮ ಸಮಯ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳಲು ಇದೊಂದು ವಿಶೇಷ ಅವಕಾಶವಾಗಿದೆ. ಕೋವಿಡ್ ಕಾರಣದಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಕಕ್ಷಿಗಾರರು ಆನ್‍ಲೈನ್/ವೀಡಿಯೋ ಕಾನ್ಫರೆನ್ಸ್/ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಅಥವಾ ಖುದ್ದಾಗಿ ಹಾಜರಾಗುವ ಮೂಲಕ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಭಾಗವಹಿಸಿ ವಿವಾದವನ್ನು ಬಗೆಹರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಆಯಾ ತಾಲೂಕಿನ ಕಾನೂನು ಸೇವಾ ಸಮಿತಿಗಳನ್ನು ಅಥವಾ ದೂರವಾಣಿ ಸಂಖ್ಯೆ: 0824-2448111 ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.