ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಜು.೧೨ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಜು.೧೨ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್‌ನಲ್ಲಿ ಉತ್ತಮ ಅವಕಾಶವಿದೆ. ರಾಷ್ಟ್ರೀಯ ಲೋಕ ಅದಾತ್‌ನಲ್ಲಿ ಪುತ್ತೂರಿನ ೬ ನ್ಯಾಯಾಲಯದಲ್ಲಿ ೭ ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಗೌ. ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶೆ ಪ್ರಕೃತಿ ಕಲ್ಯಾಣ್ ಪುರ ತಿಳಿಸಿದ್ದಾರೆ. ಅವರು ಇತ್ತೀಚಗೆ ಸುದ್ದಿಗಾರರೊಂದಿಗೆ ಮಾತನಾಡಿ ಜನರಿಗೆ ಲೋಕ್ ಅದಾಲತ್ ಬಗ್ಗೆ ತಿಳಿಯುವಂತೆ ಮಾಡಲು ಸ್ಥಳೀಯಾಡಳಿತಕ್ಕೆ ಕಸ ವಿಲೇವಾರಿ ವಾಹನಕ್ಕೆ ಒಂದು ಆಡಿಯೋ ತುಣುಕನ್ನು ನೀಡಲಾಗಿದ್ದು, ಈ ಮೂಲಕ ಪ್ರತಿ ಮನೆಗೆ ಅದಾಲತ್ ಮಾಹಿತಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಅದಾಲತ್ತಿನಲ್ಲಿ ಜನರು ಹೆಚ್ಚು ಭಾಗವಹಿಸಿದಾಗ ನ್ಯಾಯಾಲಯದ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ. ರಾಜಿ ಸಂಧಾನ ಮಾಡಿ ಪ್ರಕರಣಗಳನ್ನು ಇತ್ಯರ್ಥ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯ ಮಾನಸಿಕ ನೆಮ್ಮದಿ ಮತ್ತು ತ್ವರಿತ ನ್ಯಾಯಾಧಾನ ಸಿಗಲಿದೆ. ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಲು ಎಲ್ಲರ ಸಹಕಾರದ ಅಗತ್ಯವಿದ್ದು, ಹಣಕಾಸು ಸಂಸ್ಥೆಗಳು, ಪೊಲೀಸ್, ಆರ್ .ಟಿ.ಓ. ಪುರಸಭೆ ಅಧಿಕಾರಿಗಳು, ತಹಶೀಲ್ದಾರ್, ವಕೀಲರು, ಇನ್ಸೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ಮಾಡಲಾಗಿದೆ. ಹಣಕಾಸು ಸಂಸ್ಥೆಗಳಿಗೆ ಬಡ್ಡಿ ಹಣದಲ್ಲಿ ರಿಯಾಯಿತಿ ನೀಡಿ ಸಹಕರಿಸಬೇಕು ಎಂದು ಕೇಳಿಕೊಳ್ಳಲಾಗಿದೆ. ಸಾಲಗಾರರ ಮನವೊಲಿಸುವ ಪ್ರಯತ್ನಗಳನ್ನು ಕುಡ ಮಾಡುವಂತೆ ಅಧಿಕಾರಿಗಳಿಗೆ ಮತ್ತು ವಕೀಲರಿಗೆ ಹೇಳಲಾಗಿದೆ ಎಂದು ಹೇಳಿದರು. ಹಣಕಾಸು ಸಂಸ್ಥೆಗಳ ಚೆಕ್ ಬೌನ್ಸ್ ಪ್ರಕರಣವೇ ಸುಮಾರು ೩ ಸಾವಿರದಷ್ಟು ಇದೆ. ವ್ಯಾಜ್ಯ ಪೂರ್ವ ಪ್ರಕರಣ (ಪಿ. ಎಲ್. ಸಿ.)ವನ್ನು ಹೆಚ್ಚು ದಾಖಲಿಸಿಕೊಂಡಾಗ ಶೂನ್ಯ ಶುಲ್ಕದಲ್ಲಿ ನ್ಯಾಯ ಹೊರೆಯುತ್ತದೆ ಮತ್ತು ಅದಾಲತ್ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯವರಿಗೆ ಹಾಗೂ ಆರ್‌ಟಿಓ ದವರಿಗೆ ಈ ರೀತಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ಅವಕಾಶಗಳೂ ಇದೆ. ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣದ ನ್ಯಾಯಾಲಯದ ಶುಲ್ಕವನ್ನು ಹಿಂದಿರುಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.ಗೌ. ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಎಚ್. ಆರ್., ಯೋಗೇಂದ್ರ ಶೆಟ್ಟಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.