ಫೋಟೋ- 18ಎಂವೈಎಸ್6----ಕನ್ನಡಪ್ರಭ ವಾರ್ತೆ ಮೈಸೂರುಯುವಜನರು ಉತ್ತಮ ಕಂಪನಿಯಲ್ಲಿ ವೃತ್ತಿ ಪಡೆಯುವುದಷ್ಟೇ ಉದ್ದೇಶವಲ್ಲದೇ, ಸ್ವಯಂ ಉದ್ಯಮದ ಬಗ್ಗೆಯೂ ಹೆಚ್ಚಿನ ಆಸಕ್ತಿ ಹೊಂದಬೇಕು. ಆ ಮೂಲಕ ದೇಶದ ಉತ್ಪಾದನಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸೂಕ್ಷ್ಮ, ಸಣ್ಣ, ಮಧ್ಯಮ ಗಾತ್ರ ಕೈಗಾರಿಕೆಗಳ (ಎಂಎಸ್‌ಎಂಇ) ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ನಿರ್ದೇಶಕ ಕೆ. ದೇವರಾಜ್ ಕರೆ ನೀಡಿದರು.ಮೈಸೂರಿನ ಲಕ್ಷ್ಮೀಕಾಂತನಗರದ ಕಲ್ಯಾಣಿ ಹೊಟೇಲ್ ಸಭಾಂಗಣದಲ್ಲಿ ಕೇಂದ್ರ ಎಂಎಸ್‌ಎಂಇ ಸಚಿವಾಲಯ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಘ (ಕೆಸಿಐಡಿಎ) ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಎಸ್ಸಿ– ಎಸ್ಟಿ ಹಬ್- ಉದ್ಯಮಶೀಲತಾ ಜಾಗೃತಿ ಮತ್ತು ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಸ್ಥಾಪನೆಗೆ ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ದೇಶದಲ್ಲಿ ಎಂಎಸ್‌ಎಂಇ ಕ್ಷೇತ್ರವು ಶೇ.25 ರಿಂದ 30 ರಷ್ಟು ಜಿಡಿಪಿಗೆ ಕೊಡುಗೆ ನೀಡುತ್ತಿದೆ. ಶೇ.45 ರಿಂದ 50 ರಷ್ಟು ವಿದೇಶಿ ರಫ್ತಿನಲ್ಲಿ ಪಾಲು ಹೊಂದಿದೆ. ಉದ್ಯಮ ಸೃಷ್ಟಿಸಿದ ಉತ್ಪನ್ನಗಳಲ್ಲಿ ಶೇ.25 ರಷ್ಟನ್ನು ಸರ್ಕಾರವೇ ಖರೀದಿಸುವ ಸೌಲಭ್ಯ ಇದೆ. ಇಷ್ಟಾದರೂ ಎಸ್ಸಿ, ಎಸ್ಟಿ, ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆ ಕಡಿಮೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಉದ್ಯಮದಲ್ಲಿ ಪ್ರಾಥಮಿಕ ಸಾಧನೆ ತೋರಿದರೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ದೊರೆಯುವುದು ಸುಲಭ. ಸುಮಾರು 10 ಕೋಟಿಯವರೆಗೂ ಸಾಲ ನೀಡುವ ಅವಕಾಶವಿದ್ದು, ಅದಕ್ಕೆ ತಕ್ಕ ಪ್ರಯತ್ನ ತೋರಬೇಕು. ಗುಣಮಟ್ಟದ ಉತ್ಪನ್ನ ತಯಾರಿ, ದೂರದೃಷ್ಟಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯಮಗಳು ಆರಂಭವಾಗುತ್ತಿವೆ. ಆದರೆ, ಉತ್ಪಾದನಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದ್ದರೂ ಅಲ್ಲಿ ತೊಡಗಿಸಿಕೊಳ್ಳುವವರು ಸಂಖ್ಯೆ ಕಡಿಮೆ. ಉತ್ತಮ ಉತ್ಪನ್ನಗಳ ತಯಾರಿಕೆಯಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚು ಎಂದು ಅವರು ತಿಳಿಸಿದರು.ಎಸ್ಸಿ- ಎಸ್ಟಿ ಹಬ್ ಕಚೇರಿ ಮುಖ್ಯಸ್ಥ ಕೆ. ಸುರೇಶ್, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಕೆ. ಕಿಶೋರ್, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೃಷ್ಣಮೂರ್ತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ. ದಿನೇಶ್, ಕೆಸಿಐಡಿಎ ಅಧ್ಯಕ್ಷ ಆರ್. ಮಂಜುನಾಥ್ ಮೊದಲಾದವರು ಇದ್ದರು.----ಕೋಟ್...ಸರ್ಕಾರಿ ಉದ್ಯೋಗವೇ ಬೇಕು ಎನ್ನುವುದಕ್ಕಿಂತ ಇತರರಿಗೂ ಜೀವನಾಧಾರ ನೀಡುವ ಉದ್ಯಮ ಸ್ಥಾಪನೆ ಕನಸನ್ನು ವಿದ್ಯಾರ್ಥಿಗಳು ಕಾಣಬೇಕು. ಇದಕ್ಕೆ ಪೋಷಕರು ಒತ್ತಾಸೆ ನೀಡಬೇಕು. ಸ್ವಯಂ ಉದ್ಯೋಗ ಇಂದು ಅನಿವಾರ್ಯ. ಮೈಸೂರಿನಲ್ಲಿ ಉದ್ಯಮ ಅಭಿವೃದ್ಧಿಗೆ ಸೂಕ್ತ ಮೂಲ ಸೌಲಭ್ಯವಿದೆ. ಅದಕ್ಕೆ ಪೂರಕವಾಗಿ ಉದ್ಯಮಿಗಳು ಯೋಜನೆಗಳನ್ನು ಕಾರ್ಯಗತಗೊಳಿಸಬೇಕು.- ಟಿ. ದಿನೇಶ್, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ