ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನ್ ಮೂಲದ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಯುಚಿ ನಗಾನೊ ಮುಖ್ಯ ಅತಿಥಿಯಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಇನ್ನಿತರ ತಂತ್ರಜ್ಞಾನಗಳ ಪ್ರಗತಿಯೊಂದಿಗೆ ಆರೋಗ್ಯ ನಿರ್ವಹಣಾ ಕ್ಷೇತ್ರವು ಬಹಳಷ್ಟು ಮುಂದುವರಿದಿದೆ. ಆಸ್ಪತ್ರೆ ನಿರ್ವಹಣೆಯ ಕುರಿತು ಸೂಕ್ಷ್ಮದೃಷ್ಟಿ ಬೆಳೆಸಿಕೊಳ್ಳಲು ನಮ್ಮಲ್ಲಿರುವ ಜ್ಞಾನ, ಕನಸುಗಳು ಹಾಗೂ ಆಶಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹೆಚ್ಚಿನ ಆಸ್ಪತ್ರೆಗಳನ್ನು ಕಾರ್ಪೋರೇಟ್ ಸಂಸ್ಥೆಗಳು ನಿರ್ವಹಿಸುವುದರಿಂದ ಜನಸಾಮಾನ್ಯರಿಗೆ ವ್ಯವಸ್ಥೆಗಳು ಬಳಸಿಕೊಳ್ಳಲು ಅನುಕೂಲಕರವಾಗಿಲ್ಲ. ಆಸ್ಪತ್ರೆಯ ನಿರ್ವಾಹಕರು ರೋಗಿಗಳ ಮೇಲೆ ಸಹಾನುಭೂತಿಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಆಸ್ಪತ್ರೆ ನಿರ್ವಹಣೆಯಲ್ಲಿ ನೈತಿಕ ನಾಯಕತ್ವ ವಿಷಯದ ಕುರಿತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ಅಜಿತ್ ಎಂ. ಮಿನೇಜಸ್, ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಿಯಾತ್ಮಕ ಬದಲಾವಣೆಯ ಕುರಿತು ಎ.ಜೆ. ಹಾಸ್ಪಿಟಲ್‌ನ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲಾ ಕೆ., ನಾಯಕತ್ವದಲ್ಲಿ ನಾವಿನ್ಯತೆಯ ಕುರಿತು ಯೇನೆಪೋಯಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಡೀನ್ ಡಾ. ಸುನಿತಾ ಸಲ್ದಾನ, ಆಸ್ಪತ್ರೆ ನಿರ್ವಹಣೆ ಹಾಗೂ ಮಂಡಳಿಯ ನಾಯಕತ್ವದ ಕುರಿತು ಬೆಂಗಳೂರಿನ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಸಂಗ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾಹೆಯ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥೆ ಡಾ.ಉಷಾರಾಣಿ, ಸಕ್ರಾ ವಲ್ಡ್ ಹಾಸ್ಪಿಟಲ್‌ನ ನಿರ್ದೇಶಕಿ ನೀತಾ ವೇಗಸ್ ಇದ್ದರು. ರಾಷ್ಟ್ರದ ವಿವಿಧ ಭಾಗಗಳಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.