ಮಂಗಳೂರು: ಮೀನುಗಾರಿಕಾ ವಿಭಾಗಕ್ಕೆ ಸಂಬಂಧಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂಭತ್ತು ಒಡಂಬಡಿಕೆಗಳಿಗೆ ಮೀನುಗಾರಿಕಾ ವಿಶ್ವವಿದ್ಯಾನಿಲಯ ಸಹಿ ಹಾಕಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಹೆಚ್ಚಿನ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಮೀನಿನ ಮೌಲ್ಯವರ್ಧಿತ ಉತ್ಪಾದನೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಬೀದರ್‌ನ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ವೀರಣ್ಣ ಹೇಳಿದ್ದಾರೆ.
ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ 50ರೊಳಗೆ ಸೀಮಿತಗೊಂಡಿದ್ದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ 65ಕ್ಕೆ ಏರಿಕೆಯಾಗಿದೆ. ಅದನ್ನು 100ಕ್ಕೆ ಏರಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.
ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಡೆಸಲಾಗುತ್ತಿರುವ ಸಂಶೋಧನಾ ಕೇಂದ್ರ ಹಾಗೂ ವಿಸ್ತರಣಾ ಘಟಕಗಳ ಕಾಮಗಾರಿ ಮಾರ್ಚ್‌ನೊಳಗೆ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ. ಒಟ್ಟು 7.9 ಕೋ. ರು. ವೆಚ್ಚದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು, 5 ಕೋಟಿ ರು.ಗಳಲ್ಲಿ ಪ್ರಥಮ ಹಂತದ ಕಾಮಗಾರಿ ನಡೆದಿದೆ. ದ್ವಿತೀಯ ಹಂತದ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ಈ ಮೂಲಕ ವಿದ್ಯಾರ್ಥಿಗಳ ಸಂಶೋಧನಾ ಚಟುವಟಿಕೆಗಳು, ಪ್ರದರ್ಶನ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್ ಮಾತನಾಡಿ, ಕಾಲೇಜಿನಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಮಹಿಳಾ ಹಾಸ್ಟೆಲ್, ಕೇಂದ್ರ ಪ್ರಯೋಗಾಲಯಕ್ಕೆ ಬೇಕಾದ ಉಪಕರಣಗಳನ್ನು ನೀಡಲಾಗಿದೆ. ಕಾಲೇಜಿಗೆ ಬಸ್ಸಿನ ಜತೆಗೆ ಆಂಬುಲೆನ್ಸ್ ನೀಡಲು ಕ್ರಮ ಆಗಿದೆ ಎಂದು ಹೇಳಿದರು.ಹೈದರಾಬಾದ್ ಉದಯ ಅಕ್ವಾ ಕೆನೆಕ್ಟ್ಸ್‌ವ್ಯವಸ್ಥಾಪಕ ನಿರ್ದೇಶಕ ಉದಯ ಕೃಷ್ಣನ್ ಚತುರ್ವೇದಿ ಮಾತನಾಡಿ, ಭವಿಷ್ಯದಲ್ಲಿ ಉದ್ಯಮ ಕ್ಷೇತ್ರ ಅದರಲ್ಲೂ ಆಹಾರ ವಲಯದಲ್ಲಿ ಮೀನುಗಾರಿಕಾ ಕ್ಷೇತ್ರ ಉಜ್ವಲ ಸಾಮರ್ಥ್ಯವನ್ನು ಹೊಂದಿದ್ದು, 2047ರ ವೇಳೆಗೆ ಅತ್ಯಧಿಕ ವೇತನ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು.