ಕನ್ನಡಪ್ರಭ ವಾರ್ತೆ ಮಂಡ್ಯ
ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರವನ್ನು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಹೆಸರಾಗಿರುವ ಮಹಾರಾಷ್ಟ್ರದ ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ನಡೆಸಿಕೊಡುವರು. ಕಾರ್ಯಾಗಾರದಲ್ಲಿ ಒಂದು ಸಾವಿರ ಜನರಿಗೆ ವಸತಿ ಸಹಿತ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಾಗಾರವು ಶ್ರೀಪುಷ್ಪಗಿರಿ ಮಠದ ಡಾ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಂಪೂರ್ಣ ಸಹಯೋಗದೊಂದಿಗೆ ನಡೆಯಲಿದ್ದು, ಸಾಲ ಮಾಡಿ ಖರೀದಿಸುವ ರಸಗೊಬ್ಬರ, ಕೀಟನಾಶಕ, ಹೈಬ್ರೀಡ್ ಬಿತ್ತನೆ ಬೀಜಗಳು ರೈತಕುಲವನ್ನು ಆತ್ಮಹತ್ಯೆಯ ಹಾದಿ ಹಿಡಿಯುವಂತೆ ಮಾಡಿವೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಪರಿಸ್ಥಿತಿಯಲ್ಲಿ ರೈತರು ರೈತರಾಗಿ ಉಳಿದು ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯಾವುದನ್ನು ಖರೀದಿ ಮಾಡದೆ ಮಾಡಬಹುದಾದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲೇಬೇಕಾಗಿದೆ ಎಂದು ನುಡಿದರು.ರೈತರು ಏಕಬೆಳೆಯ ಬದಲಾಗಿ ಬಹುಬೆಳೆಯ ಪದ್ಧತಿ ಅಳವಡಿಸಿಕೊಳ್ಳುವುದು, ರಸಗೊಬ್ಬರಗಳ ಬದಲು ನಾಟಿ ಹಸುವಿನ ಸಗಣಿ ಮತ್ತು ಗಂಜಲದಿಂದ ತಯಾರಾದ ಬೀಜಾಮೃತ, ಜೀವಾಮೃತ ಬಳಸುವುದು, ಭೂಮಿಯನ್ನು ಹೊದಿಸಿ ತೇವಾಂಶ ಕಾಪಾಡಿ ನೀರನ್ನು ಕಡಿಮೆ ಬಳಸುವ ಸರಳ ನೈಸರ್ಗಿಕ ಕೃಷಿಗೆ ರೈತರು ತೆರೆದುಕೊಳ್ಳದಿದ್ದರೆ ಮುಂದಿನ ಮಕ್ಕಳ ಹಾಗೂ ಭೂಮಿಯ ಆರೋಗ್ಯ ಎಲ್ಲವೂ ಕರಾಳವಾಗಲಿದೆ ಎಂದು ಎಚ್ಚರಿಸಿದರು.
ನೇರ ಮಾರುಕಟ್ಟೆ ವಿಧಾನ:ಹಸಿರು ಕ್ರಾಂತಿಯ ಪರಿಣಾಮದಿಂದ ರೈತರು ಕಳೆದುಕೊಂಡಿರುವ ನಾಟಿ ಬೀಜಗಳು, ನಿಸರ್ಗದ ಜೊತೆ ಋತುಮಾನಕ್ಕೆ ತಕ್ಕಂತೆ ಆಯ್ಕೆ ಮಾಡುವ ಕೃಷಿ ಜ್ಞಾನ, ನೇರ ಮಾರುಕಟ್ಟೆ ವಿಧಾನಗಳಾದ ರೈತಸಂತೆಗಳನ್ನು ಪರ್ಯಾಯವಾಗಿ ಕಟ್ಟಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಶ್ರೀ ಪುಷ್ಪಗಿರಿ ಮಠದಲ್ಲಿ ನಡೆಯುವ ಕಾರ್ಯಾಗಾರಕ್ಕೆ ವಿವಿಧ ರಾಜ್ಯಗಳಿಂದ ಮತ್ತು ಪಕ್ಕದ ನೇಪಾಳದ ರೈತರು, ರೈತ ಮುಖಂಡರು ಭಾಗಿಯಾಗುತ್ತಿದ್ದು, ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಉಚಿತ ನೋಂದಣಿ:
ಕಾರ್ಯಾಗಾರಕ್ಕೆ ನೋಂದಣಿ ಶುಲ್ಕವಾಗಿ ೮೦೦ ರು. ನಿಗದಿಪಡಿಸಿದೆ. ನೋಂದಣಿಗೆ ಜ.೨ರಂದು ಕೊನೆಯ ದಿನ. ಕಾರ್ಯಾಗಾರಕ್ಕೆ ಬರಲು ಆಸಕ್ತಿ ಇದ್ದು, ನೋಂದಣಿ ಶುಲ್ಕ ಪಾವತಿಸಲು ಕಷ್ಟವಿರುವ ೧೦೦ ಸಣ್ಣ ರೈತರಿಗೆ, ಮಹಿಳಾ ರೈತರು ಹಾಗೂ ಯುವ ರೈತರಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಉಚಿತ ನೋಂದಣಿಗೆ ಮೊ:೭೬೭೬೨೮೦೧೩೬ ಸಂಪರ್ಕಿಸಲು ತಿಳಿಸಿದರು.ರೈತರಿಗೆ ಪ್ರಶಸ್ತಿ:
ಕಾರ್ಯಾಗಾರದಲ್ಲಿ ಮೂರು ದಿನಗಳ ಕಾಲ ದೇಸಿ ತಳಿಗಳ ಬೀಜ ಮೇಳ, ಆಹಾರ ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಅತಿ ಹೆಚ್ಚು ತಳಿಗಳನ್ನು ಸಂರಕ್ಷಿಸಿರುವ ಮೂವರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಗೋಷ್ಠಿಯಲ್ಲಿ ಹನಿಯಂಬಾಡಿ ಸೋಮು, ನವೀನ್, ಶಿವಲಿಂಗೇಗೌಡ, ಯೋಗೇಶ್, ರಾಮದಾಸ್, ವಿಜಯಕುಮಾರ್ ಇದ್ದರು.