ಚಿಬ್ಬಲಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಕ್ಕಿಯ ಹಾಡು ಯೋಜನೆಗೆ ಚಾಲನೆಕನ್ನಡಪ್ರಭ ವಾರ್ತೆ ಹಳಿಯಾಳ
ಪರಿಸರದ ಪ್ರಜ್ಞೆಯಿಂದ ಪ್ರಕೃತಿ ಸಂರಕ್ಷಣೆ ಸಾಧ್ಯ. ಪರಿಸರದಲ್ಲಿರುವ ಹಕ್ಕಿಗಳು ಪಕ್ಷಿಗಳು ನಮಗೆ ಬದುಕಿನ ಜೀವನದ ಪಾಠ ಕಲಿಸುತ್ತವೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮನಸ್ಸು ಹೃದಯವನ್ನು ನಾವು ತೆರೆಯಬೇಕು ಎಂದು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕ ಟಿ.ಎನ್. ಕೃಷ್ಣಮೂರ್ತಿ ಹೇಳಿದರು.ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಹಾಗೂ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ಜೊತೆಗೆ ಇಂಟರ್ ಗ್ಲೋಬ್ ಫೌಂಡೇಶನ್ ಪ್ರಾಯೋಜಕತ್ವದ ಸಹಯೋಗದಲ್ಲಿ ನಡೆಯುತ್ತಿರುವ ಕಲಿ-ಕಲಿಸು ಯೋಜನೆಯ ಕಲಾ ಅಂತರ್ಗತ ಕಲಿಕೆಯ ಭಾಗವಾಗಿ ತಾಲೂಕಿನ ಚಿಬ್ಬಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2025-26ನೇ ಸಾಲಿಗೆ ಆಯ್ಕೆಯಾದ ಪಶ್ಚಿಮ ಘಟ್ಟದ ಹಕ್ಕಿಗಳ ಜನಪದ ಸಂಶೋಧನಾ ಯಾತ್ರೆಯ ಹಕ್ಕಿಯ ಹಾಡು ಎಂಬ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿದ್ದಾಗಲೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಹಕ್ಕಿಗಳ ಅಧ್ಯಯನ ಮತ್ತು ಸಂಶೋಧನೆ ಮಾಡುವ ಅವುಗಳನ್ನು ಸಂರಕ್ಷಿಸುವ ಹವ್ಯಾಸವನ್ನು ಬೆಳೆಸಿಕೊಂಡರೇ ಪರಿಸರದ ಅಗಾದ ಜ್ಞಾನ ದೊರಕುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಬಾಬ್ರಿ ಮಾತನಾಡಿ, ಪ್ರತಿಯೊಂದು ಅಧ್ಯಯನ ಶೀಲ ಕೌಶಲ್ಯ ಚಟುವಟಿಕೆಗಳು ಕ್ರಿಯಾಶೀಲರನ್ನಾಗಿಸುತ್ತವೆ, ಹಾಗೆಯೇ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುತ್ತವೆ ಎಂದರು.
ಹಕ್ಕಿಯ ಹಾಡುಯೋಜನೆಯ ಬಗ್ಗೆ ಮಾಹಿತಿ ನೀಡಿದ ಯೋಜನೆಯ ನಿರ್ವಾಹಕ ಸಿದ್ದಪ್ಪ ಬಿರಾದಾರ, ಶಾಲೆಯಲ್ಲಿ ಚಾಲನೆಗೊಂಡಿರುವ ಹಕ್ಕಿಯ ಹಾಡು ಯೋಜನೆಯು 8ನೇ ತರಗತಿಯ ಮಕ್ಕಳಿಗೆ 15 ತಿಂಗಳುಗಳ ಕಾಲ ನಡೆಯಲಿದ್ದು, ಇದರಲ್ಲಿ ಪಕ್ಷಿಗಳ ವೀಕ್ಷಣೆ, ಮಾಹಿತಿ ಸಂಗ್ರಹ, ರಂಗರೂಪಾಂತರ, ಗೊಬೆಗಳ ತಯಾರಿಕೆ ಮತ್ತು ಪ್ರದರ್ಶನ, ಕೊನೆಯಲ್ಲಿ ಮಕ್ಕಳಿಂದಲೇ ತಯಾರಿಸಿದ ಪುಸ್ತಕ ರಚನೆ ಈ ಎಲ್ಲ ವಿಷಯ ಒಳಗೊಂಡಿರುತ್ತದೆ. ಹಲವಾರು ಸಂಪನ್ಮೂಲ ವ್ಯಕ್ತಿಗಳು ಶಾಲೆಗೆ ಆಗಮಿಸುವರು ಮತ್ತು ವಿಭಿನ್ನವಾದ ಚಟುವಟಿಕೆಗಳು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕ ಉದಾಜಿರಾವ್ ಮೋಹಿತೆ, ಶೇಜಲ್ ಅಂಗ್ರೋಳ್ಳಿ ಇದ್ದರು.