ತಂದೆ- ತಾಯಿ ಜೀವಚೈತನ್ಯದ ಸ್ವರೂಪ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Aug 22, 2024, 12:55 AM IST
ಅಶೋಕೆಯ ಗುರುದೃಷ್ಟಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. | Kannada Prabha

ಸಾರಾಂಶ

ತಂದೆಗೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ತಂದೆ, ಅವರ ತಂದೆ ಹೀಗೆ ವಿಶ್ವದ ತಂದೆಯ ಜತೆ ನಮಗೆ ಸಂಪರ್ಕ ಬೆಸೆಯುವ ಜೀವಚೈತನ್ಯದ ಪ್ರವಾಹ ಅದು.

ಗೋಕರ್ಣ: ವಿಶ್ವ ಜನಕ ಮತ್ತು ವಿಶ್ವ ಜನನಿಯ ಸ್ವರೂಪವಾಗಿ ತಂದೆ ಹಾಗೂ ತಾಯಿ ಇರುತ್ತಾರೆ. ತಂದೆ- ತಾಯಿ ಎಂದರೆ ಜೀವಚೈತನ್ಯದ ಸ್ವರೂಪ. ಅವರನ್ನು ಕಡೆಗಣಿಸಿದರೆ ಪರಮಾತ್ಮನ ಜತೆಗಿನ ಕೊಂಡಿ ಕಳಚುತ್ತದೆ. ಆದ್ದರಿಂದ ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಹೊನ್ನಾವರ ಮಂಡಲದ ಕರ್ಕಿ, ಕಡ್ಲೆ, ಹೊನ್ನಾವರ, ಹೊಸಾಕುಳಿ ಮತ್ತು ಭವತಾರಿಣಿ ವಲಯಗಳ ಶಿಷ್ಯಭಕ್ತರ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ತಂದೆಗೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ತಂದೆ, ಅವರ ತಂದೆ ಹೀಗೆ ವಿಶ್ವದ ತಂದೆಯ ಜತೆ ನಮಗೆ ಸಂಪರ್ಕ ಬೆಸೆಯುವ ಜೀವಚೈತನ್ಯದ ಪ್ರವಾಹ ಅದು. ನಮಗೂ ಪರಮಾತ್ಮನಿಗೂ ತಂದೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ತಂದೆಯನ್ನು ನಿರ್ಲಕ್ಷಿಸಿದರೆ ನಮಗೂ ಪರಮಾತ್ಮನಿಗೂ ಇರುವ ಕೊಂಡಿ ತಪ್ಪಿದಂತಾಗುತ್ತದೆ. ಅಂತೆಯೇ ತಾಯಿ, ಆಕೆಯ ತಾಯಿ ಹೀಗೆ ಚೈತನ್ಯ ಪ್ರವಾಹ ವಿಶ್ವಜನನಿಯನ್ನು ಸೇರುತ್ತದೆ ಎಂದು ವಿಶ್ಲೇಷಿಸಿದರು.ಗುರುಪರಂಪರೆ ಕೂಡಾ ಇದಕ್ಕೆ ಹೊರತಲ್ಲ. ನಮ್ಮ ಪ್ರಥಮಾಚಾರ್ಯರಾದ ವಿದ್ಯಾನಂದರ ಕೊಂಡಿ ಕಳಚಿದರೆ ನಮಗೂ, ಶಂಕರಾಚಾರ್ಯರಿಗೂ ಸಂಪರ್ಕವೇ ಇಲ್ಲದಂತಾಗುತ್ತದೆ. ಶಂಕರಾಚಾರ್ಯರ ಪ್ರತ್ಯಕ್ಷ ಶಿಷ್ಯರಾದ ವಿದ್ಯಾನಂದರ ಸಮಾಧಿಯ ಅನಾವರಣ ಇಂದು ನಡೆದಿದೆ. ಸಮಾಜದ ಶಿಷ್ಯರು ಅಲ್ಲಿಗೆ ತೆರಳಿ ಹೆಚ್ಚಿನ ಸೇವೆ ಸಲ್ಲಿಸಿ ಪ್ರಥಮಾಚಾರ್ಯರ ಆಶೀರ್ವಾದ ಪಡೆಯುವಂತಾಗಬೇಕು ಎಂದು ಆಶಿಸಿದರು.ವಿದ್ಯಾನಂದರ ಸಮಾಧಿ ಬಗ್ಗೆ ಇಂದಿಗೂ ಸಮಾಜಕ್ಕೆ ಕಲ್ಪನೆ ಇಲ್ಲ. ಗೋಕರ್ಣ ದೇವಾಲಯ ಹಸ್ತಾಂತರವಾದ ಬಳಿಕ ಕಾಕತಾಳೀಯ ಎಂಬಂತೆ ಅಜ್ಞಾತವಾಗಿದ್ದ ಅದು ಬೆಳಕಿಗೆ ಬಂದಿದೆ. ಅದರ ಜೀರ್ಣೋದ್ಧಾರ ಆ ಬಳಿಕ ಆಗಿದೆ. ಇಂದಿಗೂ ಮಹಾಬಲ ಉಪಾಧ್ಯಾಯರ ನೇತೃತ್ವದಲ್ಲೇ ಪೂಜೆ- ಪುನಸ್ಕಾರಗಳು ಇಲ್ಲಿ ನಡೆಯುತ್ತಿವೆ. ಅವರ ಸೇವೆಯನ್ನು ಇಡೀ ಸಮಾಜ ಸ್ಮರಿಸಬೇಕು ಎಂದರು.ಮೂಲಗುರುವಿನ ಸ್ಮರಣೆ ಇರಬೇಕು. ಮೂಲಗುರುಗಳು ನಮ್ಮ ಪರಂಪರೆಯ ಪ್ರಥಮಾಂಕುರ. ಅವರ ಆಶೀರ್ವಾದ ಇಡೀ ಸಮಾಜಕ್ಕೆ ಸದಾ ದೊರಕಲಿ ಎಂದು ಆಶಿಸಿದರು.

ಚಾತುರ್ಮಾಸ್ಯದಲ್ಲಿ ನಮ್ಮೊಳಗಿನ ಚೈತನ್ಯದ, ನಮ್ಮ ಶಕ್ತಿಯ ಅನಾವರಣವಾಗಬೇಕು. ಶುಭ ಪರಿವರ್ತನೆಗೆ ಇದು ಕಾರಣವಾಗಲಿ ಎಂದು ಹಾರೈಸಿದರು.ಕಾಲ ಬಗೆಗಿನ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಜ್ಯೋತಿಷ, ಆಯುರ್ವೇದ ಇವೆಲ್ಲವೂ ಅಪ್ಪಟ ವಿಜ್ಞಾನ. ಇದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಜಾತಕ ಎನ್ನುವುದು ಬ್ರಹ್ಮಾಂಡವಿದ್ದಂತೆ. ತಿಳಿದುಕೊಳ್ಳುವುದು ಬಹಳಷ್ಟಿದೆ. ನಮಗೆ ಗೊತ್ತಾದಷ್ಟನ್ನು ನಾವು ತಿಳಿಯುತ್ತೇವೆ. ದೈವಜ್ಞರು ಅದಕ್ಕೆ ದಾರಿ ತೋರಿಸುತ್ತಾರೆ ಎಂದರು.ಇದಕ್ಕೂ ಮುನ್ನ ಮಹಾಬಲ ಉಪಾಧ್ಯಾಯ ವಿದ್ಯಾನಂದರ ಸಮಾಧಿಯ ಅನಾವರಣ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ, ಕಾರ್ಯದರ್ಶಿ ಕೇಶವ ಕಿರಣ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ. ಭಟ್ ಕಬ್ಬಿನಗದ್ದೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೆರಿಗೆ ಬಾಕಿ ಇರುವ ಆಸ್ತಿ ಖರೀದಿಸಲು ಜಿಬಿಎ ನಿರ್ಧಾರ
ಆತಂಕವಿಲ್ಲದೆ ಪರೀಕ್ಷೆ ಬರೆಯಲು ಸೂಕ್ತ ವಾತಾವರಣ ಕಲ್ಪಿಸಿ