ಪಂಚೇಂದ್ರಿಯ ಹತೋಟಿಯಲ್ಲಿಡಲು ನವಜೀವನ ಸಮಿತಿ ವೇದಿಕೆ: ಡಾ. ವೀರೇಂದ್ರ ಹೆಗ್ಗಡೆ

KannadaprabhaNewsNetwork |  
Published : Oct 17, 2025, 01:03 AM IST
ಫೋಟೋ: ೧೫ಪಿಟಿಆರ್-ಜನ ಜಾಗೃತಿಗಾಂಧಿಸ್ಮೃತಿ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.  | Kannada Prabha

ಸಾರಾಂಶ

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಸಂಪನ್ನಗೊಂಡಿತು.

ಪುತ್ತೂರು: ಮದ್ಯಪಾನ ಮಾಡುವವರ ಮಾತು ಮತ್ತು ಕೃತಿಗಳು ಹಾಸ್ಯಾಸ್ಪದವಾಗುತ್ತದೆ. ಕುಡಿತದಂತಹ ಚಟಕ್ಕೆ ಬಲಿಯಾಗದೆ ತಮ್ಮ ಪಂಚೇಂದ್ರಿಯವನ್ನು ಹತೋಟಿಯಲ್ಲಿ ಇಡುವ ಕಾರ್ಯ ಮಾಡಬೇಕಾಗಿದ್ದು, ನವಜೀವನ ಸಮಿತಿಯು ದುಶ್ಚಟ ಮುಕ್ತರಿಗೆ ಬದುಕು ಸುಧಾರಿಸಿಕೊಳ್ಳುವ ಉತ್ತಮ ವೇದಿಕೆಯಾಗಿದೆ. ವ್ಯಸನ ಮುಕ್ತವಾಗುವುದರಿಂದ ಆತನ ಸಂಸಾರಕ್ಕೆ ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಯೋಜಿಸಲಾದ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕುಡಿತದಿಂದ ನಮ್ಮ ದೌರ್ಬಲ್ಯ ಇನ್ನೊಬ್ಬರ ಮುಂದೆ ಅನಾವರಣಗೊಳ್ಳುತ್ತದೆ. ಮಾನಸಿಕ ಒತ್ತಡದ ನಿವಾರಣೆಗೆ ಮದ್ಯಪಾನ ಯಾವತ್ತಿಗೂ ಪರಿಹಾರವಲ್ಲ. ಸಮಾಜದಲ್ಲಿ ಮದ್ಯವ್ಯಸನಿಗಳನ್ನು ಈ ವ್ಯಸನದಿಂದ ದೂರ ಮಾಡುವುದು ಪುಣ್ಯದ ಕಾರ್ಯವಾಗಿದೆ. ಕ್ಷೇತ್ರದ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಪೈಕಿ ಮದ್ಯ ವರ್ಜನಾ ಶಿಬಿರಗಳು ತನಗೆ ತೃಪ್ತಿ ನೀಡಿದ ಕಾರ್ಯಕ್ರಮವಾಗಿದೆ. ಈ ಶಿಬಿರದಲ್ಲಿ ಪಾಲ್ಗೊಂಡ ಲಕ್ಷಾಂತರ ಮಂದಿ ಮದ್ಯ ವ್ಯಸನ ತ್ಯಜಿಸಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಗಾಂಧಿ ಅವರ ಕಲ್ಪನೆಗಳನ್ನು, ಕನಸುಗಳನ್ನು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಅವರು ಸಮಾಜದಲ್ಲಿ ಸಾಕ್ಷೀಕರಿಸಿದ್ದಾರೆ. ಗ್ರಾಮೀಣ ಬದುಕಿನ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಮಹಿಳಾ ಸಬಲೀಕರಣದ ಗಾಂಧಿ ಚಿಂತನೆ, ಭಜನಾ ಸಂಸ್ಕೃತಿ ಶಿಕ್ಷಣದ ಕನಸುಗಳನ್ನು ಹೆಗ್ಗಡೆ ಅವರು ಸಾಕಾರಗೊಳಿಸಿದ್ದಾರೆ. ಆ ಮೂಲಕ ಧರ್ಮಸ್ಥಳ ಒಂದು ಪ್ರಯೋಗಶಾಲೆಯಾಗಿ ಬದಲಾಗಿದೆ ಎಂದರು.ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಕುಡಿತದ ಕಾರಣದಿಂದಾಗಿ ಬದುಕು ಮುಗಿದು ಹೋಯಿತು ಎಂದುಕೊಂಡಿದ್ದ ಲಕ್ಷಾಂತರ ಮಂದಿ ಶ್ರೀ ಕ್ಷೇತ್ರದ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಸೇರಿಕೊಂಡು ವ್ಯಸನ ತ್ಯಜಿಸಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಶೈವ, ವೈಷ್ಣವ ಮತ್ತು ಜೈನ ಸಮ್ಮಿಲನದ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಖಾವಂದರು ಮಹಾತ್ಮ ಗಾಂಧೀಜಿಯಂತೆ ಸಾಮಾಜಿಕ ಪರಿವರ್ತನೆ ಬಯಸಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗಾಂಧೀಜಿ ಕಂಡಿರುವ ರಾಮರಾಜ್ಯ ಶ್ರೀ ಕ್ಷೇತ್ರದ ಯೋಜನೆಗಳ ಮೂಲಕ ಸಾಕಾರಗೊಳ್ಳುತ್ತಿದೆ. ಗಾಂಧೀಜಿ ನುಡಿದ ಅಹಿಂಸೆ, ವ್ಯಸನ ಮುಕ್ತ ಸಮಾಜ, ಸ್ವದೇಶಿ ಚಿಂತನೆ, ಸ್ವಾವಲಂಬಿ ಸಮಾಜ ನಿರ್ಮಾಣ ಕಾರ್ಯ ಖಾವಂದರ ಯೋಜನೆಯ ಮೂಲಕ ನಡೆಯುತ್ತಿದೆ. ಇಂತಹ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ಅಪವಾದಗಳು ಬಂದಾಗ ಖಾವಂದರಿಗೆ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಸಮಾಜ ನೀಡಲಿದೆ ಎಂದರು.

ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮದ್ಯವರ್ಜನ ಶಿಬಿರದಲ್ಲಿ ಪಾನಮುಕ್ತರಾಗಿ ನವಜೀವನ ಸಮಿತಿಯಲ್ಲಿ ತೊಡಗಿಸಿಕೊಂಡಿರುವ ಕೆ. ಭಾಸ್ಕರ ಮೂಲ್ಯ ಕೆದಿಲ, ಅವರ ಪತ್ನಿ ಚಿತ್ರಾ, ಇನ್ನೋರ್ವ ಪಾನಮುಕ್ತ ವಸಂತ ಅವರ ಪತ್ನಿ ಶೈಲಜಾ ವಸಂತ ಬನ್ನೂರು, ಅನಿಸಿಕೆ ವ್ಯಕ್ತಪಡಿಸಿದರು.

ಸಲಕರಣೆ-ಸವಲತ್ತು ವಿತರಣೆ:

ಬನ್ನೂರು ಸರ್ಕಾರಿ ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಅನುದಾನ, ಆರ್ಯಾಪು ಸುಶೀಲಾ ಅವರಿಗೆ ಮಾಸಾಶನ, ಪ್ರತೀಕ್ಷಾ ಅವರಿಗೆ ಶಿಷ್ಯವೇತನ, ಅಝ್ವಿನಾ, ಸಮೀಕ್ಷಾ ಅವರಿಗೆ ಸುಜ್ಞಾನ ನಿಧಿ ಹಾಗೂ ಸಂಕಮ್ಮ ಅವರ ಕುಟುಂಬಕ್ಕೆ ಸಲಕರಣೆ ವಿತರಣೆ ಮಾಡಲಾಯಿತು.ಪಾನ ನಿಷೇಧ ಜಾರಿಗೆ ಮನವಿ: ರಾಜ್ಯದಲ್ಲಿ ಪಾನನಿಷೇಧ ಜಾರಿಗೆ ತರಬೇಕು. ಮದ್ಯಪಾನದ ಕುರಿತು ಮಕ್ಕಳಿಗೆ ಜಾಗೃತಿಶಿಕ್ಷಣ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಬಾರ್ ಹಾಗೂ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಮತ್ತಿತರ ಬೇಡಿಕೆಯ ಠರಾವು ಮಂಡಿಸಿ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಎಸಿ ಭಂಡಾರಿ, ಶಶಿಕುಮಾರ್ ಬಾಲ್ಯೊಟ್ಟು, ರವಿ ಮುಂಗ್ಲಿಮನೆ, ವಸಂತ ಸಾಲಿಯಾನ್, ಲೋಕೇಶ್ ಹೆಗ್ಡೆ, ತಾಲೂಕು ಅಧ್ಯಕ್ಷರಾದ ಮಹೇಶ್ ಸವಣೂರು, ಲೋಕನಾಥ, ಖಾಸಿಂ, ರೊನಾಲ್ಡ್, ಅಖಿಲೇಶ್, ಜಯಪ್ರಕಾಶ್, ಸುಭಾಶ್ಚಂದ್ರ, ಮಹಮ್ಮದ್ ಇಸ್ಮಾಯಿಲ್, ರಾಮಚಂದ್ರ, ಶಾರದಾ ಉಪಸ್ಥಿತರಿದ್ದರು. ಯೋಜನೆಯ ನಿರ್ದೇಶಕ ಬಾಬು ನಾಯ್ಕ ವಂದಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ, ಬಾಲಕೃಷ್ಣ ಅಳ್ವ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು