ಕನ್ನಡಪ್ರಭ ವಾರ್ತೆ ಹಾಸನ
ನವರಾತ್ರಿಯ ಪ್ರಥಮ ದಿನವಾದ ಶ್ರೀ ಶೈಲಪುತ್ರಿ ದೇವಿಯ ಆರಾಧನೆಯ ಅಂಗವಾಗಿ ಕಿತ್ತಳೆ ಬಣ್ಣದ ಉಡುಪು ಧರಿಸುವ ಮೂಲಕ ವಿಶೇಷವಾಗಿ ಆಚರಣೆ ನಡೆಸಲಾಯಿತು. ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಶಾಲೆಯ ಸಮಸ್ತ ಮಹಿಳಾ ಸಿಬ್ಬಂದಿ ವರ್ಗದವರು ಒಂದೇ ಬಣ್ಣದ ಆಕರ್ಷಕ ಉಡುಪಿನಲ್ಲಿ ಭಾಗವಹಿಸಿ ಗಮನ ಸೆಳೆದರು. ಎಲ್ಲರೂ ಒಟ್ಟಾಗಿ ಸೇರಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದು, ಶಾಲೆಯ ‘ಸ್ಕಾಲರ್ಸ್ ಕುಟುಂಬ’ದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಪ್ರತಿಬಿಂಬಿಸಿತು. ನವರಾತ್ರಿ ಹಬ್ಬವು ದುಷ್ಟಶಕ್ತಿಗಳ ವಿರುದ್ಧ ದೈವಿಕ ಶಕ್ತಿಯ ವಿಜಯವನ್ನು ಸಾರುವ ಪವಿತ್ರ ಹಬ್ಬವಾಗಿದ್ದು, ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ವಿವಿಧ ಸ್ವರೂಪಗಳನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಬಣ್ಣಗಳ ಉಡುಪು ಧರಿಸುವ ಸಂಪ್ರದಾಯವು ಹಬ್ಬದ ಆಚರಣೆಗೆ ಮತ್ತಷ್ಟು ಆಕರ್ಷಣೆ ನೀಡುತ್ತದೆ. ಅದರಂತೆ ಶಾಲೆಯಲ್ಲಿಯೂ ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ನವರಾತ್ರಿ ಆಚರಣೆಗೆ ವಿಶೇಷ ಮೆರುಗು ನೀಡಿದರು.ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಮಾತನಾಡಿ, ನವರಾತ್ರಿ ಹಬ್ಬವು ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ಇಂತಹ ಹಬ್ಬಗಳು ನಮ್ಮಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆಯನ್ನು ಬೆಳೆಸುತ್ತವೆ. ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷ ನೆಲೆಸಲಿ ಎಂದು ಶುಭ ಹಾರೈಸಿದರು.