ನವೀನ್‌ ಪಡೀಲ್‌ಗೆ ‘ವಿಶ್ವಪ್ರಭಾ ಪುರಸ್ಕಾರ 2025’

KannadaprabhaNewsNetwork | Published : Dec 28, 2024 1:01 AM

ಸಾರಾಂಶ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡುಪಿ ವಿಶ್ವನಾಥ್ ಶೆಣೈ - ಪ್ರಭಾವತಿ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ - 2025’ಕ್ಕೆ ತುಳು - ಕನ್ನಡ ಚಲನಚಿತ್ರ - ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಅವರನ್ನು ಆರಿಸಲಾಗಿದೆ. ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರು. ನಗದು ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡುಪಿ ವಿಶ್ವನಾಥ್ ಶೆಣೈ - ಪ್ರಭಾವತಿ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ - 2025’ಕ್ಕೆ ತುಳು - ಕನ್ನಡ ಚಲನಚಿತ್ರ - ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಅವರನ್ನು ಆರಿಸಲಾಗಿದೆ. ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರು. ನಗದು ಒಳಗೊಂಡಿದೆ.

ಫೆಬ್ರವರಿಯಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈ ಸಿಸಭಾಂಗಣದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ, ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ವಿಘ್ನೇಶ್ವರ ಅಡಿಗ ಹಾಗೂ ಸಂಚಾಲಕ ರವಿರಾಜ್ ಎಚ್.ಪಿ.ಇದ್ದರು.

15,000 ನಾಟಕಗಳಲ್ಲಿ ಅಭಿನಯ:

ನವೀನ್ ಡಿ. ಪಡಿಲ್ ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ತುಳು ರಂಗಭೂಮಿಯಲ್ಲಿ ಅವರು ‘ಕುಸಲ್ದ ಅರಸೆ’ ಎಂದೇ ಪ್ರಸಿದ್ಧರು.

ದೇವದಾಸ್ ಕಾಪಿಕಾಡ್ ಮತ್ತು ಆನಂದ್ ಬೋಳಾರ್ ಜೊತೆ ಸೇರಿ ‘ಬಲೇ ಚಾ ಪರ್ಕ’ ಎಂಬ ತುಳು ನಾಟಕ ತಂಡದ ಮೂಲಕ 1990ರ ಆರಂಭದಲ್ಲಿ ತುಳು ಹಾಸ್ಯ ನಾಟಕಗಳಲ್ಲಿ ಕಾಣಿಸಿಕೊಂಡ ಪಡೀಲ್, 1993ರಲ್ಲಿ ಪ್ರಸಿದ್ಧ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ನಿರ್ದೇಶನದಲ್ಲಿ ಮಲಯಾಳಂ ಚಿತ್ರ ವಿಧೇಯನ್ ಚಲನಚಿತ್ರದಲ್ಲಿ ಮಮ್ಮೂಟ್ಟಿ ಜೊತೆಗೆ ಅಭಿನಯಿಸಿ ಹಿರಿತೆರೆಗೆ ಕಾಲಿಟ್ಟರು. ಈವರೆಗೆ ನೂರಾರು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ರೆಡ್ ಎಫ್ಎಂ ತುಳು ಚಲನಚಿತ್ರ ಪ್ರಶಸ್ತಿ, ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಜೀಟಿಕೆ ಎನ್ನುವ ತುಳು ಸಿನೆಮಾದಲ್ಲಿ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಪಡೀಲ್ ಅವರು ಇಂಗ್ಲಂಡ್, ಆಸ್ಟ್ರೇಲಿಯಾ, ನೈಜೀರಿಯ, ಕೀನ್ಯ, ದುಬೈ, ಮಸ್ಕತ್, ಕತಾರ್, ಬೆಹೆರೈನ್, ಸೌದಿ ಅರೇಬಿಯಾ, ಸುಮಾರು 35 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ತಮ್ಮ ನಾಟಕಗಳ ಮತ್ತು ಪ್ರತಿಭೆ ಪ್ರದರ್ಶನ ನೀಡಿದ್ದಾರೆ.

Share this article