ಕನ್ನಡಪ್ರಭ ವಾರ್ತೆ ಅರಸೀಕೆರೆ
ಪ್ರತಿ ವರ್ಷದಂತೆ ಈ ವರ್ಷವೂ ನಗರದ ಪೇಟೆ ಬೀದಿಯ ಶ್ರೀ ಜೈನ ಭವನದಲ್ಲಿ ಜೈನ ಯುವ ಮಂಡಳಿ ವತಿಯಿಂದ ಆಯೋಜಿಸಲಾದ ನವರಾತ್ರಿ ದಾಂಡಿಯ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.ಈ ಬಾರಿ ವಿಶೇಷವಾಗಿ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರತಿದಿನ ದೇವಿಗೆ ಅಲಂಕಾರ, ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ದಾಂಡಿಯ, ಗುಜರಾತಿ ಗರ್ಭ, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಯುವ ಮಂಡಳಿಯ ಅಧ್ಯಕ್ಷ ಚೇತನ್ ಜೈನ್ ಮಾತನಾಡಿ, ಕಳೆದ ಹದಿಮೂರು ವರ್ಷಗಳಿಂದ ಜೈನ ಭವನದಲ್ಲಿ ನವರಾತ್ರಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಎಲ್ಲಾ ಸಮಾಜದ ಬಂಧುಗಳ ಪ್ರೋತ್ಸಾಹದಿಂದ ಇದು ಯಶಸ್ವಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ದೇವಿಯ ಶಕ್ತಿ ದೊರಕಲಿ ಎಂದು ಶುಭ ಹಾರೈಸಿದರು.ವಿಜಯದಶಮಿ ದಿನ ಸಂಜೆ ಮಹಾಮಂಗಳಾರತಿ ನಂತರ ತಾಯಿ ಚಾಮುಂಡೇಶ್ವರಿಯ ರಥೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು. ಬಳಿಕ ಕಂತೆನಹಳ್ಳಿ ಕೆರೆಯಲ್ಲಿ ದೇವಿಯ ಭವ್ಯ ವಿಸರ್ಜನೆ ನೆರವೇರಿತು.ಕಾರ್ಯಕ್ರಮಕ್ಕೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಚಾಲನೆ ನೀಡಿದರು. “ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ದೊರಕಲಿ” ಎಂದು ಅವರು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಸೂರಣ, ನಾಗಭೂಷಣ್, ಹೇಮಂತ್ ಕುಮಾರ್, ಕಿರಣ್ ಕುಮಾರ್, ಸಂತೋಷ್ ಕುಮಾರ್, ಮಂಜುನಾಥ, ಸಿದ್ದೇಶ್ ಭಂಡಾರಿ ಸೇರಿದಂತೆ ಹಲವು ಗಣ್ಯರು, ಸಮಾಜ ಸೇವಕರು, ಜೈನ ಯುವ ಮಂಡಳಿಯ ಕಾರ್ಯಕರ್ತರು ಹಾಗೂ ನೂರಾರು ಯುವಕರು, ಭಕ್ತರು ಪಾಲ್ಗೊಂಡು ನವರಾತ್ರಿ ಸಂಭ್ರಮವನ್ನು ಹೆಚ್ಚಿಸಿದರು.