ನಾಯಕನಹಟ್ಟಿ: ಮಳೆ ಅಬ್ಬರಕ್ಕೆ ನಾಯಕನಹಟ್ಟಿ ಅಕ್ಷರಶಃ ನಲುಗಿಹೋಗಿದೆ. ಸೋಮವಾರ ರಾತ್ರಿ ಎಡೆಬಿಡದೇ ಸುರಿದ ಮಳೆ ಪ್ರವಾಹ ಸೃಷ್ಟಿಸಿದ್ದು, ಎಂಟು ದಿಕ್ಕುಗಳಿಂದಲೂ ಸಾರಿಗೆ ಸಂಪರ್ಕ ಕಡಿತಗೊಂಡು ಒಂದು ರೀತಿಯಲ್ಲಿ ಜಲದಿಗ್ಬಂಧನಕ್ಕೆ ಒಳಗಾಗಿದೆ.
ಚಿಕ್ಕಕೆರೆ ಕೋಡಿ ಕಾಲುವೆ ಉಕ್ಕಿ ಹರಿಯುತ್ತಿರುವುದರಿಂದ ಜಗಳೂರು-ನಾಯಕನಹಟ್ಟಿ, ಚಳ್ಳಕೆರೆ ನಾಯಕನಹಟ್ಟಿರಸ್ತೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಬಂದ್ ಆಗಿತ್ತು. ಗುರುತಿಪ್ಪೇರುದ್ರಸ್ವಾಮಿ ದೇಗುಲದ ಬಳಿಯ ಮನುಮೈನಹಟ್ಟಿ ಹಳ್ಳ , ಎನ್.ದೇವರಹಳ್ಳಿ ಹಳ್ಳ, ತೊರೆಕೋಲಂನಳ್ಳಿ ಹಳ್ಳ, ಜಾಗನೂರಹಟ್ಟಿ ಹಳ್ಳ ಕೊಳ್ಳಗಳು ಅಬ್ಬರಿಸುತ್ತಿರುವುದರಿಂದ ಇಡೀ ನಾಯಕನಹಟ್ಟಿ ಒಂದು ರೀತಿಯಲ್ಲಿ ಕಂಡರಿಯದ ಜಲದಿಗ್ಬಂಧನಕ್ಕೆ ಒಳಗಾಗಿತ್ತು.
ಚಿಕ್ಕಕೆರೆ ಹಳ್ಳ ಆರ್ಭಟಿಸಿದ್ದು, ಮುಕ್ಕಾಲು ಭಾಗ ಪಟ್ಟಣವನ್ನು ಆಪೋಷನ ತೆಗೆದುಕೊಂಡಿದೆ. ಒಳಮಠದ ಸಮೀಪದಲ್ಲೇ ಹರಿಯುತ್ತಿರುವ ಹಳ್ಳ ಜನರ ಎದೆ ನಡುಗಿಸುವಂತೆ ಉಕ್ಕಿಹರಿಯುತ್ತಿದೆ. ಇದರಿಂದ ಒಳಮಠದ ಕಲ್ಯಾಣಮಂಟಪ ಸೇರಿದಂತೆ ಬಿಳೇಕಲ್ ಬಡಾವಣೆ, ಇದೇ ಅಚ್ಚುಕಟ್ಟಿನಲ್ಲಿ ಬರುವ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳನ್ನು ನುಣಿಚಿ ಹಾಕಿದೆ. ಹೊರಮಠಕ್ಕೆ ನುಗ್ಗಿದ ನೀರುಪೂರ್ವ ದಿಕ್ಕಿನಲ್ಲಿರುವ ಚಿಕ್ಕಕೆರೆ ಕೋಡಿ ಕಾಲುವೆ ಮಣ್ಣಿನಿಂದ ಮುಚ್ಚಿರುವ ಪರಿಣಾಮ ಹಳ್ಳ ಸೃಷ್ಟಿಗೊಂಡು ಭಾರೀ ನೀರು ಹೊರಮಠಕ್ಕೆ ನುಗ್ಗಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಹೊರಮಠಕ್ಕೆ ನೀರು ನುಗ್ಗಿರುವ ದೃಶ್ಯ ಇದೇ ಪ್ರಥಮ ಎಂದು ಹಟ್ಟಿಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕೋಡಿ ಕಾಲುವೆ ದುರಸ್ತಿ ಮಾಡದೇ ಸಣ್ಣ ನೀರಾವರಿ ಇಲಾಖೆ ತೋರಿರುವ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂಬುದಾಗಿ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವಾರದಿಂದ ಮಳೆ ಅನಾಹುತ ಸಂಭವಿಸುತ್ತಿದ್ದರೂ, ಸ್ಥಳೀಯ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇತ್ತ ಮುಖ ಮಾಡಿಲ್ಲ. ಕನಿಷ್ಠ ಜಿಲ್ಲಾಧಿಕಾರಿಯೂ ಜನರ ಸಂಕಷ್ಟ ಕೇಳಲು ಬಂದಿಲ್ಲ ಎಂದು ರಾಷ್ಟ್ರೀಯ ಕಿಸಾನ್ ಸಂಘ ಅಧ್ಯಕ್ಷ ಬಿ.ಟಿ.ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊಚ್ಚಿ ಹೋದ ೭ ಕುರಿ; ೨೫ ಮನೆಗೆ ನುಗ್ಗಿದ ನೀರುನಾಯಕನಹಟ್ಟಿ ಹೋಬಳಿ ಭೀಮನಕೆರೆ ಗ್ರಾಮದ ಹಳ್ಳದಲ್ಲಿ 7 ಕುರಿಗಳು ಕೊಚ್ಚಿ ಹೋಗಿವೆ. ಮನುಮೈನಹಟ್ಟಿ ಏಕಾಂತೇಶ್ವರ ದೇಗುಲದ ಬಳಿಯ 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನೆರೆ ಸಂತ್ರಸ್ತರಿಗೆ ಏಕಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಬೆಳಗ್ಗೆ ಅವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಓಬಯ್ಯನಹಟ್ಟಿ, ತಿಪ್ಪಯ್ಯನಕೋಟೆಯ ಕೆರೆಗಳು ಕೋಡಿ ಹರಿದಿವೆ, ಗಜ್ಜುಗಾನಹಳ್ಳಿ ಹಳ್ಳದಲ್ಲಿ ಮೊಳಕಾಲ್ಮೂರು ತಾಲೂಕಿನ ಮರಳಳ್ಳಿ ಬಳಿ ಟ್ಯಾಕ್ಟರ್ ಕೊಚ್ಚಿ ಹೋಗಿದೆ. ಎಂದು ಕಂದಾಯ ನಿರೀಕ್ಷಕ ಚೇತನ್ ಮಾಹಿತಿ ನೀಡಿದ್ದಾರೆ. ಠಾಣೆ ಸ್ಥಳಾಂತರಕ್ಕೆ ವರದಿ: ಪಿಎಸ್‌ಐ
ಪೊಲೀಸ್ ಠಾಣೆ ತಗ್ಗು ಪ್ರದೇಶದಲ್ಲೇ ನಿರ್ಮಾಣಗೊಂಡಿದೆ. ಸಾಮಾನ್ಯ ಮಳೆಗೂ ಇಲ್ಲಿ ನೀರು ಸಂಗ್ರಹ ಆಗುತ್ತಿತ್ತು ಎಂಬುದಾಗಿ ನಾಗರಿಕರು ಹೇಳುತ್ತಾರೆ. ಹಲವು ಬಾರಿ ಠಾಣೆಗೆ ನೀರು ನುಗ್ಗಿದೆ. ಇದರಿಂದ ಇಲಾಖೆ ಕಡತಗಳನ್ನು ಕಾಪಾಡಿಕೊಳ್ಳುವುದು ಕೂಡ ಕಷ್ಟ ಆಗಿದೆ. ಹಾಗಾಗಿ, ಪಟ್ಟಣದ ಪ್ರವಾಸಿ ಮಂದಿರ ಇರುವ ಎತ್ತರ ಪ್ರದೇಶ ಕಡೆ ಠಾಣೆ ಸ್ಥಳಾಂತರ ಮಾಡಿದರೆ ಉತ್ತಮ ಅನಿಸಿದೆ. ಮೇಲಧಿಕಾರಿಗಳಿಗೆ ಈ ಕುರಿತು ವರದಿ ನೀಡಲಾಗುವುದು.- ದೇವರಾಜ್, ಪಿಎಸ್‌ಐ, ನಾಯಕನಹಟ್ಟಿ ಪೊಲೀಸ್ ಠಾಣೆ