ತಿಪ್ಪೇಶನ ತೇರು ಕಣ್ತುಂಬಿಕೊಳ್ಳಲು ಭಕ್ತ ಸಮೂಹದ ಕ್ಷಣಗಣನೆ । ನವ ವಧುವಿನಂತೆ ರಥೋತ್ಸವ ಗ್ರಾಮದ ಸಿಂಗಾರ
ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಮಾರ್ಚ್ 16 ರ ಭಾನುವಾರ ನಡೆಯಲಿದ್ದು, ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಟ್ಟಿ ತಿಪ್ಪೇಶನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಜಾತ್ರೆಗೆ ನಾಡಿನ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಜಾತ್ರೆ ಪ್ರಯುಕ್ತ ನಾಯಕನಹಟ್ಟಿ ಪಟ್ಟಣ ನೂತನ ವಧುವಿನಂತೆ ಸಿಂಗಾರಗೊಂಡಿದೆ.ಪಟ್ಟಣದ ಎಲ್ಲಾ ವಾರ್ಡ್ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಿಸಿಲು ಹೆಚ್ಚಿರುವ ಕಾರಣ ಭಕ್ತಾಧಿಗಳಿಗೆ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಂದಾಯ ಇಲಾಖೆಯಿಂದ ಸುಮಾರು 50 ಟ್ಯಾಂಕರ್, 20 ಸಾವಿರ ಲೀಟರ್ ಸಾಮರ್ತ್ಯದ 6 ಹಾಲಿನ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ರೂಪಿಸಲಾಗಿದೆ.
ಅದರಂತೆಯೇ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಮುಕ್ತಿಬಾವುಟ ಹರಾಜಿನ ಬಾಬ್ತು ಬಾಕಿ ಇರಿಸಿಕೊಂಡಿರುವವರು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಾತ್ರೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಪಟ್ಟಣದ ಹಲವು ಕಡೆಗಳಲ್ಲಿ ಬಸ್‍ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ-ಜಗಳೂರು- ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಪಟ್ಟಣದ ಗಂಗಯ್ಯನಹಟ್ಟಿ ಬಳಿ. ಬಳ್ಳಾರಿ-ಅನಂತಪುರ- ರಾಯದುರ್ಗ- ಕಲ್ಯಾಣದುರ್ಗ ಕಡೆಯಿಂದ ಬರುವ ವಾಹನಗಳಿಗೆ ತಳಕು ರಸ್ತೆಯ ಮದರಸಾದ ಬಳಿ. ಬೆಂಗಳೂರು- ತುಮಕೂರು- ಚಳ್ಳಕೆರೆ- ಚಿತ್ರದುರ್ಗ ಮಾರ್ಗದಿಂದ ಬರುವವರಿಗೆ ಮನಮೈನಹಟ್ಟಿ ಏಕಾಂತೇಶ್ವರ ದೇವಾಲಯದ ಬಳಿ ಬಸ್‍ನಿಲ್ದಾಣಗಳನ್ನು ತೆರೆಯಲಾಗಿದೆ.
ಶ್ರೀ ಕ್ಷೇತ್ರ ನಾಯಕನಹಟ್ಟಿಯಲ್ಲಿ ಮಾ.15 ರಿಂದ 17ರ ವರೆಗೆ ಜರುಗಲಿರುವ ಶ್ರೀಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ ಘಟಕಗಳಿಂದ ಒಟ್ಟು 200 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.