ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟ ವಿಸ್ತರಣೆ : ಸಿ.ಟಿ. ರವಿ

KannadaprabhaNewsNetwork | Published : Aug 18, 2024 1:53 AM

ಸಾರಾಂಶ

ಚಿಕ್ಕಮಗಳೂರು, ಬಿಜೆಪಿ, ಜೆಡಿಎಸ್ ನಗರಸಭಾ ಸದಸ್ಯರ ಜೊತೆ ಸಭೆ ನಡೆಸಿ ಚರ್ಚಿಸಿದ್ದು, ಎನ್‌ಡಿಎ ಮೈತ್ರಿಕೂಟವನ್ನು ನಗರಸಭೆಗೂ ವಿಸ್ತರಿಸುವಂತೆ ತೀರ್ಮಾನ ಕೈಗೊಂಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಎರಡೂ ಪಕ್ಷಗಳ ಮುಖಂಡರು ಹಾಗೂ ನಗರಸಭೆ ಸದಸ್ಯರನ್ನೊಳಗೊಂಡ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಿಜೆಪಿ, ಜೆಡಿಎಸ್ ನಗರಸಭಾ ಸದಸ್ಯರ ಜೊತೆ ಸಭೆ ನಡೆಸಿ ಚರ್ಚಿಸಿದ್ದು, ಎನ್‌ಡಿಎ ಮೈತ್ರಿಕೂಟವನ್ನು ನಗರಸಭೆಗೂ ವಿಸ್ತರಿಸುವಂತೆ ತೀರ್ಮಾನ ಕೈಗೊಂಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಎರಡೂ ಪಕ್ಷಗಳ ಮುಖಂಡರು ಹಾಗೂ ನಗರಸಭೆ ಸದಸ್ಯರನ್ನೊಳಗೊಂಡ ಸಭೆಯಲ್ಲಿ ಚರ್ಚಿಸಿದ ಬಳಿಕ ಸಭೆಯಲ್ಲಿ ನಡೆದ ವಿಷಯಗಳ ಚರ್ಚೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ನಗರಸಭೆಗೂ ಎನ್‌ಡಿಎ ಮೈತ್ರಿಕೂಟ ವಿಸ್ತರಿಸುವ ತೀರ್ಮಾನದಂತೆ ಮುಂದಿನ ನಗರಸಭೆ ಅವಧಿಯನ್ನು ಮೂರು ಅವಧಿಯಾಗಿ ವಿಂಗಡಿಸಿ ಎರಡು ಅವಧಿಗೆ ಬಿಜೆಪಿ ಒಂದು ಅವಧಿಗೆ ಜೆಡಿಎಸ್ ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂದರು.

ಹಿಂದಿನ ತಪ್ಪುಗಳು ಮರುಕಳಿಸದಂತೆ ಎರಡೂ ಪಕ್ಷಗಳ ಸದಸ್ಯರು ಒಗ್ಗಟ್ಟಿನಿಂದ ಒಳ್ಳೆಯ ಜನಪರ ಆಡಳಿತ ನೀಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಮುಂದೆ ಯಾರು ನಗರಸಭಾಧ್ಯಕ್ಷರಾಗಬೇಕೆಂಬ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ನಿರ್ಣಯಿಸಲಾಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳ ಘೋಷಣೆ ಮಾಡಿ ನಿರ್ಧಾರ ಪ್ರಕಟಿಸುತ್ತೇವೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಜೆಡಿಎಸ್ ಬಿಜೆಪಿ ಹೊಂದಾಣಿಕೆ ರಾಜ್ಯ ಮಟ್ಟದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಮಾಡಿದಂತೆ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ನಗರಸಭೆ ಚುನಾವಣೆ ಬಂದಿದೆ ಎಂದರು.ರಾಜ್ಯಮಟ್ಟದಲ್ಲಿ ನಡೆದ ಹೊಂದಾಣಿಕೆ ಆಭಾದಿತ, ಅದನ್ನು ತೋರಿಸಲು ಎರಡೂ ಪಕ್ಷಗಳ ಮುಖಂಡರು ಹಾಗೂ ನಗರಸಭಾ ಸದಸ್ಯರು ಸಭೆ ಸೇರಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.ತಾವು, ಸಿ.ಟಿ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಈ ಮೂವರಿಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಮಾಡಲು ಸೂಚನೆ ಇದ್ದು, ಎಲ್ಲಾ ಸದಸ್ಯರು ನಮ್ಮ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಾಯಿ ಸಮಿತಿಗೆ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ಚುನಾವಣೆ ಮುಂಚೆ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ. ಎಲ್ಲರೂ ನಮ್ಮ ಮೇಲೆ ವಿಶ್ವಾಸವಿಟ್ಟು ತೀರ್ಮಾನಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಮುಖಂಡರಾದ ಕೋಟೆ ರಂಗನಾಥ್, ಪ್ರೇಮ್‌ಕುಮಾರ್‌, ಪುಷ್ಪರಾಜ್‌, ನಗರಸಭೆ ಸದಸ್ಯರಾದ ಉಮಾದೇವಿ ಕೃಷ್ಣಪ್ಪ, ಟಿ.ರಾಜಶೇಖರ್, ಕವಿತಾ ಶೇಖರ್, ದೀಪ ರವಿಕುಮಾರ್, ಮಧುಕುಮಾರ್ ರಾಜ್ ಅರಸ್, ಸುಜಾತ ಶಿವಕುಮಾರ್, ಎ.ಸಿ.ಕುಮಾರೇಗೌಡ, ರೂಪ ಕುಮಾರ್, ಗೋಪಿ, ಅನು ಮಧುಕರ್, ಶೀಲಾ ದಿನೇಶ್, ಮಣಿಕಂಠ, ವಿಫುಲ್‌ಕುಮಾರ್ ಜೈನ್, ಜೆ.ರಾಜು, ಅಮೃತೇಶ್ ಚೆನ್ನಕೇಶವ, ಭವ್ಯ ಮಂಜುನಾಥ್, ಲಲಿತ ರವಿನಾಯ್ಕ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಿ.ಟಿ. ರವಿ

ಚಿಕ್ಕಮಗಳೂರು; ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ವಿರುದ್ಧವೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇಂಥ ಸಂದರ್ಭ ಹಿಂದೆ ಬಂದಾಗ ಅಂದು ಸಿಎಂ ಆಗಿದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೇಳಿದರು.

ರಾಮಕೃಷ್ಣ ಹೆಗ್ಡೆ ಅವರ ಮೇಲೆ ವಿವಿಧ ಹಗರಣಗಳ ಆರೋಪ ಬಂದಾಗ ರಾಜಿನಾಮೆ ನೀಡಿದ್ದರು. ಬಿ.ಎಸ್. ಯಡೀಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ತಕ್ಷಣ ರಾಜಿನಾಮೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವವರಾಗಿದ್ದು, ಆ ಮೇಲ್ಪಂಕ್ತಿಯನ್ನು ಪಾಲಿಸುತ್ತಾರೆಂಬ ನಂಬಿಕೆ ಇದೆ ಎಂದರು.

ರಾಜ್ಯದ ರಾಜಕೀಯ ನಾಯಕರು ಅನುಸರಿಸಿರುವ ನೈತಿಕ ಮೌಲ್ಯವನ್ನು ಸಿದ್ದರಾಮಯ್ಯ ಅವರೂ ಎತ್ತಿ ಹಿಡಿಯಬೇಕು ಎಂದು ವಿನಂತಿಸುತ್ತೇನೆ. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿ ಎಂದು ಆಗ್ರಹಿಸಿದರು.

ಪೋಟೋ ಫೈಲ್‌ ನೇಮ್‌ 17 ಕೆಸಿಕೆಎಂ 7ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಎಸ್‌.ಎಲ್‌. ಭೋಜೇಗೌಡ ಅವರ ಉಪಸ್ಥಿತಿಯಲ್ಲಿ ಶನಿವಾರ ಬಿಜೆಪಿ ಹಾಗೂ ಜೆಡಿಎಸ್‌ ನಗರಸಭಾ ಸದಸ್ಯರ ಸಭೆ ನಡೆಯಿತು.

Share this article