ಕನ್ನಡಪ್ರಭ ವಾರ್ತೆ ಮೈಸೂರು
ಪ್ರಧಾನಿ ಮೋದಿ ಮೈಸೂರಿಗೆ ಬರುತ್ತಿರುವುದಕ್ಕೆ ನನ್ನದೇನೂ ತಕರಾರಿಲ್ಲ. ಆದರೆ, ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನ ಜನರಿಗೆ ತಿಳಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗ, ತೆರಿಗೆ ಹಂಚಿಕೆ, ಬರಗಾಲಕ್ಕೆ ಇಂದಿನವರೆಗೂ ಯಾಕೆ ಪರಿಹಾರ ನೀಡಿಲ್ಲ ಎಂಬುದಕ್ಕೆಲ್ಲಾ ಪ್ರಧಾನಿ ಮೋದಿ ಅವರು ಉತ್ತರ ಹೇಳಲಿ ಎಂದು ಒತ್ತಾಯಿಸಿದರು.ದೇಶದಲ್ಲಿ ಮತ್ತೆ ಎನ್.ಡಿ.ಎಗೆ ಪೂರ್ಣ ಬಹುಮತ ದೊರಕುವುದಿಲ್ಲ, ಇಂಡಿಯಾ ಮೈತ್ರಿಗೆ ಬಹುಮತ ದೊರೆಯಲಿದೆ. 400 ಹೆಚ್ಚು ಸ್ಥಾನ ಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿ ತಪ್ಪಿಸುವ ಕಾರ್ಯತಂತ್ರವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅನಂತಕುಮಾರ್ ಹೆಗಡೆ ಮೇಲೆ ಯಾವ ಕ್ರಮ ಕೈಗೊಂಡ್ರಿ?ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಬದಲಾಯಿಸುತ್ತೇವೆಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಆಗ ಹೆಗಡೆ ಮೇಲೆ ಯಾವ ಕ್ರಮ ಕೈಗೊಂಡ್ರಿ? ಅವತ್ತು ಅವರು ಕೇಂದ್ರ ಸಚಿವರಾಗಿದ್ದರು. ಅವತ್ತೇ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಹೆಗಡೆ ಉತ್ತರ ಕನ್ನಡದಲ್ಲಿ ಏನು ಕೆಲಸ ಮಾಡಿರಲಿಲ್ಲ. 5 ವರ್ಷ ಮನೆಯಲ್ಲೇ ಕುಳಿತಿದ್ದ. ಚುನಾವಣೆ ಸಮಯದಲ್ಲಿ ಹೊರಗೆ ಬಂದಿದ್ದ. ಅವನು ಸೋಲುವುದು ಗೊತ್ತಿದ್ದು, ಹೀಗಾಗಿ ಅವನಿಗೆ ಟಿಕೆಟ್ ಕೊಟ್ಟಿಲ್ಲ ಅಷ್ಟೇ ಎಂದು ತಿರುಗೇಟು ನೀಡಿದರು.ಬಿಜೆಪಿ ಯಾವತ್ತೂ ಸಂವಿಧಾನದ ಪರವಾಗಿಲ್ಲ. ಸಂವಿಧಾನ ಜಾರಿಯಾದಾಗ ಸಾವರ್ಕರ್ ಹಾಗೂ ಗೋಲ್ವಾಲ್ಕರ್ ಅವರು ಸಂವಿಧಾನವನ್ನು ವಿರೋಧಿಸಿದ್ದರು ಎಂದರು.ಎನ್ಐಎ, ಪೊಲೀಸರಿಗೆ ಸಿಎಂ ಧನ್ಯವಾದರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಿದ ಎನ್ಐಎ ಹಾಗೂ ರಾಜ್ಯ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ. ಆರೋಪಿಗಳನ್ನು ಕೊಲ್ಕತ್ತಾದಿಂದ ರಾಜ್ಯಕ್ಕೆ ಕರೆ ತರಲಾಗುತ್ತಿದೆ. ಉಳಿದ ವಿಚಾರಗಳು ತನಿಖೆಯಿಂದ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.