‘ಲೋಕ’ ಚುನಾವಣೆ ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ: ತಹಸೀಲ್ದಾರ್ ನಯೀಂ ಉನ್ನೀಸಾ

KannadaprabhaNewsNetwork | Published : Apr 13, 2024 1:03 AM

ಸಾರಾಂಶ

85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಅದರಂತೆ ಅರ್ಹ 85 ವರ್ಷ ಮೇಲ್ಪಟ್ಟ 316 ಮಂದಿ ಮತದಾರರು ಹಾಗೂ ವಿಕಲಚೇತನ 70 ಮಂದಿ ಅರ್ಹ ಮತದಾರರನ್ನು ಗುರುತಿಸಲಾಗಿದೆ .

ಕನ್ನಡಪ್ರಭ ವಾರ್ತೆ ನಾಗಮಂಗಲ

ಲೋಕಸಭಾ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ತಹಸೀಲ್ದಾರ್ ನಯೀಂಉನ್ನೀಸಾ ತಿಳಿಸಿದರು.

ಜಿಲ್ಲಾ ಕೇಂದ್ರದಿಂದ ಪಡೆದಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯವಸ್ಥೆಗೊಳಿಸಿರುವ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ತೆರೆದು ಮತಯಂತ್ರಗಳನ್ನು ಶುಕ್ರವಾರ ಮತಗಟ್ಟೆವಾರು ಪ್ರತ್ಯೇಕಿಸಲಾಗಿದೆ ಎಂದರು.

ಮತಗಟ್ಟೆವಾರು ಜೋಡಿಸಲಾದ ಮತಯಂತ್ರಗಳಿಗೆ ಮತಪತ್ರಗಳನ್ನು ಅಳವಡಿಸಿ, ವಿವಿಪ್ಯಾಟ್‌ಗಳಿಗೆ ಚಿಹ್ನೆಗಳನ್ನು ಅಳವಡಿಸುವ ಕಾರ್ಯವನ್ನು ಏ.13 ಮತ್ತು 14ರಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಸಲಾಗುವುದು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿರಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮತಯಂತ್ರಗಳನ್ನು ಹೊಂದಿಸುವ ಕಾರ್ಯವನ್ನು 19 ಮಂದಿ ಸೆಕ್ಟರ್ ಅಧಿಕಾರಿಗಳು ನಡೆಸುವರು. ಇವರ ಜೊತೆಗೆ ವಿಧಾನಸಭಾ ವ್ಯಾಪ್ತಿಗೆ ನಿಯೋಜಿಸಲ್ಪಟ್ಟ 10 ಮಂದಿ ಮಾಸ್ಟರ್ ಟ್ರೇನರ್‌ಗಳನ್ನು ನಿಯೋಜಿಸಲಾಗಿದೆ. ಈ ಎರಡೂ ದಿನ ವಿವಿಪ್ಯಾಟ್‌ಗಳಿಗೆ ಚಿಹ್ನೆಗಳನ್ನು ಅಳವಡಿಸುವ ಕಾರ್ಯ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 5ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಗೃಹ ಮತದಾನ:

85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಅದರಂತೆ ಅರ್ಹ 85 ವರ್ಷ ಮೇಲ್ಪಟ್ಟ 316 ಮಂದಿ ಮತದಾರರು ಹಾಗೂ ವಿಕಲಚೇತನ 70 ಮಂದಿ ಅರ್ಹ ಮತದಾರರನ್ನು ಗುರುತಿಸಲಾಗಿದೆ ಎಂದರು.

ಏ.16ರಿಂದ 18ರ ವರೆಗೆ ಮೂರು ದಿನಗಳ ಕಾಲ ಗೃಹ ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗೃಹ ಮತದಾನಕ್ಕೆ ಮತದಾನ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ವಿಡಿಯೋಗ್ರಾಫರ್, ಪೋಲಿಸ್ ಸಿಬ್ಬಂದಿ ಹಾಗೂ ಸೆಕ್ಟರ್ ಅಧಿಕಾರಿಯನ್ನೊಳಗೊಂಡ 6 ತಂಡಗಳನ್ನು ನಿಯೋಜಿಸಲಾಗಿದೆ. ಈ ಮೂರು ದಿನಗಳ ಕಾಲ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಗೃಹಮತದಾನ ಪ್ರಕ್ರಿಯೆ ನಡೆಸಲಾಗುವುದು ಎಂದರು.

ತಾಲೂಕು ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆಗೆ ಪೂರಕವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 260 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಏ.26 ರಂದು ಸುಗಮ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದರು.

ಮತದಾನ ಸಿಬ್ಬಂದಿಗೆ ಈಗಾಗಲೇ ಮೊದಲನೇ ಹಂತದ ತರಬೇತಿ ನೀಡಲಾಗಿದೆ. ಎರಡನೇ ಹಂತದ ತರಬೇತಿಯನ್ನು ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್ ಪೋಸ್ಟ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಏ.20ರಂದು ಆಯೋಜಿಸಲಾಗಿದೆ. ಮತಗಟ್ಟೆಯ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳು ಅಂದು ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

Share this article