ದೊಡ್ಡಬಳ್ಳಾಪುರ: ಮಳೆಗಾಲ ಪ್ರಾರಂಭ ಆಗುತ್ತಿದ್ದು, ಈ ಸಂದರ್ಭದಲ್ಲಿ ತೊಟ್ಟಿ, ಚರಂಡಿ ಹಾಗೂ ಇನ್ನಿತರ ಘನ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಯಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ಡೆಂಘೀ, ಮಲೇರಿಯಾ, ಚಿಕನ್ ಗುನ್ಯ ನಂತಹ ರೋಗಗಳು ಕಂಡು ಬರುವ ಸಂಭವ ಹೆಚ್ಚಿದ್ದು ರೋಗವನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆ, ಜಿಲ್ಲಾ ಮಟ್ಟದ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಮಟ್ಟದ ಒಂದನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸೊಳ್ಳೆ ಉತ್ಪತ್ತಿ ತಾಣಗಳಾದ ತೆರೆದ ತೊಟ್ಟಿ, ಮೇಲ್ಚಾವಣಿ ಇಲ್ಲದ ತೊಟ್ಟಿಗಳು ಕಿರು ನೀರು ಸರಬರಾಜು ಮಾಡುವಂತಹ ತೊಟ್ಟಿಗಳನ್ನು ಭದ್ರವಾದ ಮುಚ್ಚಳ ಅಥವಾ ಬಟ್ಟೆಯನ್ನು ಮುಚ್ಚಬೇಕು. ಶಾಲೆ ಅಂಗನವಾಡಿ ಕೇಂದ್ರಗಳಲ್ಲಿ ತೆರೆದ ತೊಟ್ಟಿ ಗಳಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವುಗಳ ಮೇಲ್ಭಾಗವನ್ನು ಮುಚ್ಚಬೇಕು. ಈ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಭಿತ್ತಿ ಪತ್ರಗಳು, ನಾಮಫಲಕಗಳನ್ನು ಶಾಲಾ-ಕಾಲೇಜು, ಆಸ್ಪತ್ರೆ ಅಂಗಡಿ-ಮುಂಗಟ್ಟು, ಕೈಗಾರಿಕೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ತಂಬಾಕು ಸೇವನೆ ನಿಯಂತ್ರಿಸಲು ಹೆಚ್ಚು ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ತಿಳಿಸಿದರು.ಆರೋಗ್ಯದ ದೃಷ್ಟಿಯಿಂದ ಗರ್ಭಿಣಿ ಹಾಗೂ ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಲಸಿಕೆಗಳು ಪಡೆಯುತ್ತಿದ್ದಾರೆಯೇ ಎಂಬುದರ ಬಗ್ಗೆ ಗಮನ ಹರಿಸಬೇಕು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿಯರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ ಎಂದರು.
ರೇಬೀಸ್, ಹಾವು ಕಚ್ಚುವಿಕೆ, ನಾಯಿ ಕಚ್ಚಿದಾಗ ನೀಡುವಂತಹ ಲಸಿಕೆಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಿ, ಈ ರೀತಿಯ ಪ್ರಕರಣಗಳು ಕಂಡು ಬಂದಾಗ ಸೂಕ್ತ ಚಿಕಿತ್ಸೆ ಅತ್ಯಗತ್ಯ. ಹಾಗಾಗಿ ಔಷಧಿ ಕೊರತೆಯೇ ಯಾಗದಂತೆ ನೋಡಿಕೊಳ್ಳಿ ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಕಾರಿ ಲಕ್ಕ ಕೃಷ್ಣ ರೆಡ್ಡಿ, ಡಾ. ಸಿಮಾ, ಡಾ.ಹೇಮಾವತಿ, ಡಾ.ಕೋಮಲ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೋ-3ಕೆಡಿಬಿಪಿ1- ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಹಾಗೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು,